ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಗಳ ಜನರು ವಿಪರೀತ ಸೆಕೆಯಿಂದಾಗಿ ತತ್ತರಿಸಿ ಹೋಗಿರುವ ನಡುವೆ ಕೆಲ ಜಿಲ್ಲೆಗಳಲ್ಲಿ ಇಂದು ಅಕಾಲಿಕವಾಗಿ ಸುರಿದ ಮಳೆ ತಂಪೆರೆದಿದೆ. ಕೊಡಗು, ಚಿಕ್ಕಮಗಳೂರಲ್ಲಿ ಬೆಳಗಾವಿಯಲ್ಲಿ ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿರುವ ಪ್ರಸಂಗವೂ ನಡೆದಿದೆ.
ಬೆಳಗಾವಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಸದಾಶಿವ ನಗರ, ನೆಹರು ನಗರ, ಶಾಹು ನಗರದಲ್ಲಿ ವರುಣ ಅಬ್ಬರಿಸಿದ್ದಾನೆ. ಕೊಡಗಿನ ಹಲವೆಡೆಯೂ ಧಾರಾಕಾರ ಮಳೆಯಾಗಿದ್ದು, ಸುಡು ಬಿಸಿಲಿನ ಸಂದರ್ಭ ಸುರಿದ ಮಳೆ ಕಾಫಿ ಬೆಳೆಗಾರರಲ್ಲಿ ಹರ್ಷ ತಂದಿದೆ.
ಚಿಕ್ಕಮಗಳೂರಿನ ಹಲವೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾರಿ ಗಾಳಿಯೊಂದಿಗೆ ಉತ್ತಮ ಮಳೆಯಾಗಿದ್ದು, ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಕೂಡ ಸುರಿದಿದೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಮತ್ತು ಕಡಬಗೆರೆ ಭಾಗದಲ್ಲಿ ಭಾರೀ ಮಳೆಯಾಗಿದ್ದರೆ, ಮೂಡಿಗೆರೆ ಮತ್ತು NR ಪುರ ತಾಲೂಕಿನ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಕಣತಿ ಗ್ರಾಮದ ಬಳಿ ಮಳೆಗೆ ಮರ ಧರೆಗುರುಳಿದ ಹಿನ್ನೆಲೆ ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಹೇಗಿರಲಿದೆ ನಾಳೆ ರಾಜ್ಯದ ಹವಾಮಾನ?
ರಾಜ್ಯದ 4-5 ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಳೆಯೂ ಗಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಅಂದಾಜಿಸಲಾಗಿದೆ. ಯಾದಗಿರಿ, ರಾಯಚೂರು, ಕಲಬುರಗಿ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಉಷ್ಣತೆ ಕಂಡುಬರಲಿದೆ. ಬೆಂಗಳೂರಿನ ತಾಪಮಾನ ಗರಿಷ್ಠ 33-34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಗಾಳಿಯ ವೇಗ ಗಂಟೆಗೆ 8-15 ಕಿಲೋ ಮೀಟರ್ ಇರಲಿದ್ದು, ಮಳೆಯ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಕಿಮ್ಸ್ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಯುವಕ ಬಲಿ?


















