ಬಾಗಲಕೋಟೆ / ದಾವಣಗೆರೆ : ಕೇಂದ್ರ ಚುನಾವಣೆ ಆಯೋಗವು ಇಂದು ಪಂಚ ರಾಜ್ಯ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದ್ದು, ಈ ಮಧ್ಯೆ ರಾಜ್ಯದ ಬಾಗಲಕೋಟೆ, ದಾವಣಗೆರೆಯ ಉಪಚುನಾವಣೆಗೂ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೇ ಎಂದು ತಿಳಿದು ಬಂದಿದೆ.
ಕೇಂದ್ರ ಚುನಾವಣೆ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದ್ದು, ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಒಂದು ವಾರದೊಳಗಾಗಿ ಉಪ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಎಚ್ ವೈ ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳು ತೆರವಾಗಿವೆ. ಈ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿರುಸಿನ ಸಿದ್ದತೆ ನಡೆಯುತ್ತಿದೆ.
ಬಾಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಟಿಕೆಟ್ ಫೈಟ್ ಜೋರಾಗಿದೆ. ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಪೈಪೋಟಿ ನಡೆಯುತ್ತಿದೆ. ದಾವಣಗೆರೆ ದಕ್ಷಿಣಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುವುದು ಕಾಂಗ್ರೆಸ್ ಮುಸ್ಲಿಂ ಮುಖಂಡರ ಬೇಡಿಕೆಯಾಗಿದೆ. ಆದರೆ ಇದಕ್ಕೆ ಸಚಿವ ಎಸ್.ಎಸ್ ಮಲ್ಲಕಾರ್ಜುನ ಅವರ ವಿರೋಧ ಇದೆ.
ಇನ್ನು ಬಿಜೆಪಿಯಲ್ಲೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೈಪೋಟಿ ಇದೆ. ಜಿಎಸ್ ಸಿದ್ದೇಶ್ವರ ಮತ್ತು ಎಂಪಿ ರೇಣುಕಾಚಾರ್ಯ ಬಣಗಳ ನಡುವೆ ಟಿಕೆಟ್ ಗಾಗಿ ಪೈಪೋಟಿ ಇದೆ. ಈ ಭಿನ್ನಮತದ ಹಿನ್ನೆಲೆಯಲ್ಲಿ ಪ್ರತ್ಯೇಕ ಸಭೆಗಳು ನಡೆದಿವೆ. ಭಿನ್ನಮತ ಶಮನ ಮಾಡುವ ನಿಟ್ಟಿನಲ್ಲಿ ಜಿಲ್ಲೆಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇದರ ನಡುವೆ ಬಿಜೆಪಿಯಲ್ಲಿ ಅಚ್ಚರಿಯ ಅಭ್ಯರ್ಥಿ ಹೆಸರು ಕೇಳಿಬರುತ್ತಿದ್ದು, ಇನ್ನೆರಡು ದಿನಗಳಲ್ಲಿ ಅಂತಿಮ ಪಟ್ಟಿ ಹೊರ ಬೀಳುವ ಸಾಧ್ಯತೆ.
ಇದನ್ನೂ ಓದಿ : ಆಟೋ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆಗೈದ ದುಷ್ಕರ್ಮಿಗಳು!


















