ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಅಸ್ಸಾಂನ 10ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ.
ಹೌದು.. ಅಸ್ಸಾಂನಲ್ಲಿ ಆಪರೇಷನ್ ಕಮಲ ತಡೆಯಲು ಡಿಸಿಎಂ ಡಿ.ಕೆ.ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ. 10ಕ್ಕೂ ಹೆಚ್ಚು ‘ಕೈ’ ಶಾಸಕರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ರಾತ್ರಿ ವಿಮಾನ ನಿಲ್ದಾಣದಿಂದ ಪೊಲೀಸ್ ಬಂದೋಬಸ್ತ್ ಮತ್ತು ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ನೇರವಾಗಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರಿಗೆ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ತಂಡದಲ್ಲಿ ಶಾಸಕರಾದ ಮಂಗು ಖಿಲಾ, ಅಪ್ಪಲ ಸ್ವಾಮಿ, ರಾಜನ್ ಎಕ್ಕಾ, ಅಶೋಕ್ ಕುಮಾರ್ ಸೇರಿದಂತೆ ಹಲವು ನಾಯಕರು ಇದ್ದಾರೆ. ಜೊತೆಗೆ ಮಾಜಿ ಸಂಸದ ಭಕ್ತ ಚರಣ್ ದಾಸ್ ಹಾಗೂ ಕಾಂಗ್ರೆಸ್ ವಕ್ತಾರ ದುರ್ಗಾ ಪ್ರಸಾದ್ ಪಾಂಡಾ ಸೇರಿ ಒಟ್ಟು ಸುಮಾರು 10ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಅಸ್ಸಾಂನಲ್ಲಿ ಪಕ್ಷ ಬದಲಾವಣೆಯ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆ ಕಾಂಗ್ರೆಸ್ ತೊರೆದು ಶಾಸಕರು ಎನ್‌ಡಿಎ ಸೇರುತ್ತಿದ್ದಾರೆ. ಹೀಗಾಗಿ ‘ಕೈ’ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಡಿಕೆಶಿ ಮತ್ತೆ ಟ್ರಬಲ್ ಶೂಟರ್ ಆಗಿದ್ದಾರೆ.
ಡಿಕೆ ಶಿವಕುಮಾರ್ ಅಸ್ಸಾಂ ಚುನಾವಣಾ ಉಸ್ತುವಾರಿಯಾಗಿದ್ದು, ಅಸ್ಸಾಂ ನಾಯಕ ಗೌರವ್ ಗೊಗೋಯ್ ಜೊತೆಗೆ ಮಾತುಕತೆ ನಡೆಸಿದ್ದರು. ಅಸ್ಸಾಂ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಮಹತ್ವದ ಜವಾಬ್ದಾರಿಯನ್ನು ಡಿಕೆಶಿ ಹೊತ್ತುಕೊಂಡಿದ್ದಾರೆ. ಇಂದು ಪ್ರಧಾನಿ ಮೋದಿ ಅವರು ಅಸ್ಸಾಂಗೆ ತೆರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಸ್ಸಾಂ ‘ಕೈ’ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ.
ಇದನ್ನೂ ಓದಿ : ಬೆಂಗಳೂರಿಗರಿಗೆ ಶುಭ ಸುದ್ದಿ – ಗ್ಯಾಸ್ ಕೊರತೆ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಸ್ಪಷ್ಟನೆ!



















