ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಜೈಲು ವಾರ್ಡನ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರಕಾಶ್ ಗಾವಡೆ ಎಂದು ಗುರುತಿಸಲಾಗಿದೆ.
ಮಾರ್ಚ್ 9 ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ಈ ಘಟನೆ ನಡೆದಿದೆ. ಆ ದಿನ ನಿಯೋಜನೆಗೊಂಡಿದ್ದ ವಾರ್ಡನ್ ಪ್ರಕಾಶ್ ಗಾವಡೆ ಜೈಲಿನೊಳಗೆ ಪ್ರವೇಶಿಸುವ ವೇಳೆ ತಪಾಸಣೆ ವಿಭಾಗ–2ರಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಅವನನ್ನು ಪರಿಶೀಲನೆಗೆ ಒಳಪಡಿಸಿದರು. ಈ ವೇಳೆ ಅವನ ಒಳಉಡುಪಿನಲ್ಲಿ ಹಣ ಮತ್ತು ಕಪ್ಪು ಟೇಪ್‌ನಿಂದ ಸುತ್ತಿದ ಒಂದು ಪೊಟ್ಟಣ ಪತ್ತೆಯಾಯಿತು. ಅನುಮಾನಗೊಂಡ ಸಿಬ್ಬಂದಿ ಅದನ್ನು ತೆರಳಿ ಪರಿಶೀಲಿಸಿದಾಗ ಅದರೊಳಗೆ ಗಾಂಜಾ ಇರುವುದನ್ನು ಕಂಡುಬಂದಿದೆ.
ಪ್ರಕಾಶ್ ಗಾವಡೆ ಕೆಎಸ್‌ಐಎಸ್‌ಎಫ್ ಸಿಬ್ಬಂದಿಯ ಕಣ್ಣು ತಪ್ಪಿಸಿ ಗಾಂಜಾ ಜೈಲಿನೊಳಗೆ ಸಾಗಿಸಲು ಯತ್ನಿಸುತ್ತಿದ್ದ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಅವನನ್ನು ವಶಕ್ಕೆ ಪಡೆದ ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿಯೊಬ್ಬನು ಪ್ರಕಾಶ್‌ಗೆ ಕರೆ ಮಾಡಿ ಗಾಂಜಾ ತಂದುಕೊಡಲು ಸೂಚಿಸಿದ್ದಾನೆ ಎಂಬ ಮಾಹಿತಿ ಹೊರಬಂದಿದೆ. ಹೊರಗಿನಿಂದ ಗಾಂಜಾ ತಂದು ಜೈಲಿನೊಳಗೆ ತಲುಪಿಸಿದರೆ ಹತ್ತು ಸಾವಿರ ರೂಪಾಯಿ ನೀಡುವುದಾಗಿ ಆ ಆರೋಪಿ ಹೇಳಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಇನ್ಮುಂದೆ ಮಕ್ಕಳ ಕೈಯ್ಯಲ್ಲಿ ಮೊಬೈಲ್ ಇದ್ರೆ ಪೋಷಕರಿಗೆ ನೋ ಟೆನ್ಶನ್.. ಇಲ್ಲಿದೆ ನೋಡಿ ಕಾರಣ!


















