ದಾವಣಗೆರೆ : ಬೆಣ್ಣೆನಗರಿ ದಾವಣಗೆರೆಯಲ್ಲಿ ಉದ್ಯಮಿಯನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡಿದ ಗ್ಯಾಂಗ್‌ನ್ನು ವಿದ್ಯಾನಗರ ಠಾಣೆಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕಷ್ಟದಲ್ಲಿರುವ ಮಹಿಳೆ ಎಂದು ಸ್ಪಂದಿಸಿದ ಉದ್ಯಮಿಯನ್ನೇ ಬುಟ್ಟಿಗೆ ಹಾಕಿಕೊಂಡಿದ್ದ ಯುವತಿ, ತನ್ನ ತಂಡದೊಂದಿಗೆ ಸೇರಿ ಉದ್ಯಮಿಯನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿದ್ದಳು. ಇದೀಗ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಹನಿಟ್ರ್ಯಾಪ್ ಮಾಡಿದ್ದ ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ 27 ವರ್ಷದ ಸುಷ್ಮಿತಾ, ದಾವಣಗೆರೆ ನಿವಾಸಿ, 66 ವರ್ಷದ ಉದ್ಯಮಿಯೊಬ್ಬರ ಬಳಿ ಹೋಗಿ ನನಗೆ ಕಷ್ಟ ಇದೆ ಎಂದು ಪರಿಚಯ ಮಾಡಿಕೊಂಡಿದ್ದಳು. ಆ ಪರಿಚಯ ಸ್ನೇಹವಾಗಿ ಬೆಳೆದಿತ್ತು. ನಂತರ ಇತರ ಆರೋಪಿಗಳೊಂದಿಗೆ ಒಳಸಂಚು ರೂಪಿಸಿ ಸಿದ್ದವೀರಪ್ಪ ಬಡಾವಣೆಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಸಂತ್ರಸ್ತ ಇರುವುದನ್ನು ತಿಳಿದುಕೊಂಡು ಅಲ್ಲಿಗೆ ಹೋಗಿ ಗ್ಯಾಂಗ್ ವಿಡಿಯೋ ಮಾಡಿಕೊಂಡಿತ್ತು. ನಂತರ ಆ ವಿಡಿಯೋವನ್ನು ಅವರಿಗೆ ತೋರಿಸಿ ದುಡ್ಡಿಗಾಗಿ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ.
ಸಂತ್ರಸ್ತ ಉದ್ಯಮಿಗೆ ವಿಡಿಯೋ ತೋರಿಸಿ ನಮ್ಮ ಬೇಡಿಕೆಗೆ ಒಪ್ಪದೆ ಇದ್ದರೆ ಎಲ್ಲಾ ಸೋಷಿಯಲ್ ಮೀಡಿಯಾ, ಮಾಧ್ಯಮಗಳಲ್ಲಿ ಹರಿಬಿಡುತ್ತೇವೆ ಎಂದು ಹೆದರಿಸಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ಸಂತ್ರಸ್ತ ಉದ್ಯಮಿ 12 ಲಕ್ಷ ಕೊಡುವುದಾಗಿ ಹೇಳಿ ಆ ಸ್ಥಳದಿಂದ ಬಂದಿದ್ದರು. ನಂತರ ಅವರಿಗೆ ಪದೇ ಪದೆ ಪೋನ್ ಮಾಡಿ ಹೆದರಿಸಿದ್ದಾರೆ. ಒಂದು ಲಕ್ಷ ತೆಗೆದುಕೊಂಡು ಆಂಜನೇಯ ಬಡಾವಣೆ ಬಳಿ ಬರಲು ಹೇಳಿದ್ದಾರೆ. ಅಲ್ಲಿಗೆ ಹೋದಾಗ ಆ ಒಂದು ಲಕ್ಷ ರೂಗಳನ್ನು ಆರೋಪಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದರಿಂದ ನೊಂದ ಉದ್ಯಮಿ ಪೊಲೀಸ್ ಠಾಣೆ ಮೆಟ್ಟಿಲೀರಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೆಯೇ ಅವರಿಂದ 1 ಲಕ್ಷ ರೂಗಳನ್ನು ಸೀಜ್ ಮಾಡಿದ್ದಾರೆ.
ಇದನ್ನೂ ಓದಿ : ಮಹಿಳೆಯ ಕೊಲೆ ಕೇಸ್ – ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!



















