ಬೆಂಗಳೂರು | 2026ರ ಐಪಿಎಲ್ ಸಮೀಪಿಸುತ್ತಿರುವ ಬೆನ್ನಲ್ಲೇ RCB ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬೆಂಗಳೂರಿನಲ್ಲಿ ತನ್ನ ತವರು ಪಂದ್ಯಗಳನ್ನು (5 ಪಂದ್ಯಗಳು) ಆಡಲು ಒಪ್ಪಿಗೆ ಸೂಚಿಸಿದೆ. ಇದರ ಜೊತೆಗೆ ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯವು ಕೂಡ ಬೆಂಗಳೂರಿನಲ್ಲೇ ನಡೆಯಲಿದೆ.
ಕಳೆದ ಐಪಿಎಲ್ ವಿಜಯೋತ್ಸವದ ಕಾಲ್ತುಳಿತದ ಘಟನೆಯ ಬಳಿಕ ಈ ವರ್ಷ ಆರ್‌ಸಿಬಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ಆಡುತ್ತೋ ಇಲ್ಲವೋ ಎಂಬ ಗೊಂದಲ, ಕುತೂಹಲವೂ ಇತ್ತು. ಅದಕ್ಕೆ ಈಗ ತೆರೆ ಬಿದ್ದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ 5 ಮ್ಯಾಚ್ ಆಡೋದು ಖಚಿತವಾಗಿದೆ.
ಬೆಂಗಳೂರಿನಲ್ಲಿ 5 ಪಂದ್ಯಗಳು
2026ರ ಐಪಿಎಲ್ ವೇಳಾಪಟ್ಟಿ ಪ್ರಸ್ತುತ ಪ್ರಕಟವಾಗಿಲ್ಲ. ಆದಾಗ್ಯೂ ಈ ಬಾರಿಯ ಐಪಿಎಲ್ ಮಾರ್ಚ್ 28ರಿಂದ ಆರಂಭವಾಗಲಿದೆ ಎಂದು ವರದಿಯಾಗಿದೆ. ಅದರಂತೆ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ ಎಂದು ವರದಿಯಾಗಿದೆ.
ಇದರ ಜೊತೆಗೆ ಆರ್‌ಸಿಬಿ ತವರು ಪಂದ್ಯಗಳ ಲೆಕ್ಕದಲ್ಲಿ ಐದು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಲಿದ್ದು, ಉಳಿದ ಎರಡು ಪಂದ್ಯಗಳನ್ನು ಛತ್ತೀಸ್ಗಢದ ರಾಯ್ಪುರದಲ್ಲಿ ಆಡಲಿದೆ ಎಂದು ಹೇಳಲಾಗಿದೆ. ಇದರರ್ಥ ಬೆಂಗಳೂರು ಹೊರತಾಗಿ ರಾಯ್ಪುರ ಕೂಡ ಆರ್ಸಿಬಿಯ ಎರಡನೇ ತವರು ಮೈದಾನವಾಗಲಿದೆ.
ಇದನ್ನೂ ಓದಿ : ದೀದಿ ಕೋಟೆಯಲ್ಲಿ ಕಮಲ ಕಹಳೆ | ಈ ಬಾರಿ ಭವಾನಿಪುರದಿಂದ ಮಮತಾ ವಿರುದ್ಧ ಸುವೇಂದು ಕಣಕ್ಕೆ?



















