ಟೆಹ್ರಾನ್: ಅಮೆರಿಕ, ಇಸ್ರೇಲ್ ದಾಳಿಗೆ ಇರಾನ್‌ನ ಅತ್ಯುನ್ನತ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಪ್ರತೀಕಾರ ತೀರಿಸಿಯೇ ಸಿದ್ಧ ಎಂದು ಇರಾನ್‌ನ ಕ್ರಾಂತಿಕಾರಿ ಪಡೆ (IRGC) ಘೋಷಿಸಿದೆ. ತೀವ್ರ ಸ್ವರೂಪದ ಸೇಡು ತೀರಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಸರ್ಕಾರಿ ಟಿವಿ ಖಮೇನಿ ಹತ್ಯೆಯನ್ನು ಖಚಿತಪಡಿಸಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಹಾಗೂ ಇಸ್ರೇಲ್ ವಿರುದ್ಧ ಇತಿಹಾಸದಲ್ಲೇ ಅತ್ಯಂತ ಭೀಕರ ಪ್ರತಿದಾಳಿ ನಡೆಸುವುದಾಗಿ ಇರಾನ್ ಶಪಥ ಮಾಡಿದೆ.
ತಮ್ಮ ಸರ್ವೋಚ್ಚ ನಾಯಕನ ಹಂತಕರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಇರಾನ್‌ನ ಕ್ರಾಂತಿಕಾರಿ ಪಡೆ ಗುಡುಗಿದೆ. ಟೆಲಿಗ್ರಾಮ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪಡೆ, “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಅತ್ಯಂತ ಭೀಕರವಾದ ದಾಳಿ ಯಾವುದೇ ಕ್ಷಣದಲ್ಲಾದರೂ ಆರಂಭವಾಗಬಹುದು” ಎಂದು ಎಚ್ಚರಿಸಿದೆ. ಈ ದಾಳಿಯು ಇಸ್ರೇಲ್ ವಶಪಡಿಸಿಕೊಂಡಿರುವ ಪ್ರದೇಶಗಳು ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಲಿದೆ ಎಂದು ಸ್ಪಷ್ಟಪಡಿಸಿದೆ. ಸಾಮಾನ್ಯ ಸೇನೆಗಿಂತ ಭಿನ್ನವಾಗಿ, ನೇರವಾಗಿ ಪರಮೋಚ್ಚ ನಾಯಕನ ನಿಯಂತ್ರಣದಲ್ಲಿರುವ ಈ ಕ್ರಾಂತಿಕಾರಿ ಪಡೆ, ಹಂತಕರಿಗೆ ಕಠಿಣ ಹಾಗೂ ನಿರ್ಣಾಯಕ ಶಿಕ್ಷೆ ನೀಡದೆ ಬಿಡುವುದಿಲ್ಲ ಎಂದು ಘೋಷಿಸಿದೆ. ಇದೇ ವೇಳೆ, ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಮುಖ್ಯಸ್ಥ ಅಲಿ ಲಾರಿಜಾನಿ ಕೂಡ ಅಂತಾರಾಷ್ಟ್ರೀಯ ದಬ್ಬಾಳಿಕೆ ನಡೆಸುವವರಿಗೆ ಇರಾನ್‌ನ ಧೀರ ಸೈನಿಕರು ಮರೆಯಲಾಗದ ಪಾಠ ಕಲಿಸಲಿದ್ದಾರೆ ಎಂದು ಸವಾಲು ಹಾಕಿದ್ದಾರೆ.
ಆಡಳಿತ ಬದಲಾವಣೆಯ ಗುರಿ
1989ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದ, ಪಾಶ್ಚಿಮಾತ್ಯ ರಾಷ್ಟ್ರಗಳ ಬದ್ಧ ವೈರಿ 86 ವರ್ಷದ ಖಮೇನಿ ಅವರನ್ನು ಹತ್ಯೆ ಮಾಡುವ ಮೂಲಕ ಇರಾನ್ ಸರ್ಕಾರವನ್ನು ಉರುಳಿಸುವುದು ಅಮೆರಿಕ ಮತ್ತು ಇಸ್ರೇಲ್‌ನ ಪ್ರಮುಖ ಗುರಿಯಾಗಿದೆ. 2003ರ ಇರಾಕ್ ಆಕ್ರಮಣದ ನಂತರ ಅಮೆರಿಕ ಕೈಗೊಂಡಿರುವ ಅತ್ಯಂತ ದೊಡ್ಡ ಸೇನಾ ಕಾರ್ಯಾಚರಣೆ ಇದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಖಮೇನಿಯನ್ನು “ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬರು” ಎಂದು ಕರೆದಿದ್ದು, ಪರಮಾಣು ಒಪ್ಪಂದಕ್ಕಿಂತ ಹೆಚ್ಚಾಗಿ ಇರಾನ್‌ನಲ್ಲಿ ಆಡಳಿತ ಬದಲಾವಣೆಯೇ ತಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ಜನತೆಗೆ ತಮ್ಮ ದೇಶವನ್ನು ಮರಳಿ ಪಡೆಯಲು ಇದೊಂದು ಸುವರ್ಣಾವಕಾಶ ಎಂದು ಟ್ರಂಪ್ ಹೇಳಿದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಇರಾನ್ ಪ್ರಜೆಗಳು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಆಡಳಿತವನ್ನು ಕಿತ್ತೊಗೆಯಲು ಒಂದಾಗುವಂತೆ ಕರೆ ನೀಡಿದ್ದಾರೆ.
ಇರಾನ್ ಪ್ರತಿದಾಳಿ ಆರಂಭ
ಇರಾನ್ ಈಗಾಗಲೇ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಪ್ರತಿದಾಳಿ ಆರಂಭಿಸಿದ್ದು, ಮಧ್ಯಪ್ರಾಚ್ಯದಾದ್ಯಂತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಅಬುಧಾಬಿಯಲ್ಲಿ ಇಬ್ಬರು ಮತ್ತು ಟೆಲ್ ಅವಿವ್‌ನಲ್ಲಿ ಒಬ್ಬರು ಈ ದಾಳಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್ ಅವರ ಪ್ರಕಾರ, ಈ ಕಾರ್ಯಾಚರಣೆಯು ಜೂನ್‌ನಲ್ಲಿ ನಡೆದ 12 ದಿನಗಳ ಯುದ್ಧಕ್ಕಿಂತಲೂ ಅತಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಭದ್ರತಾ ದೃಷ್ಟಿಯಿಂದ ಇರಾನ್, ಇರಾಕ್, ಕುವೈತ್, ಸಿರಿಯಾ, ಯುಎಇ ಮತ್ತು ಇಸ್ರೇಲ್ ತಮ್ಮ ವಾಯುಪ್ರದೇಶಗಳನ್ನು ನಾಗರಿಕ ವಿಮಾನಗಳಿಗಾಗಿ ಬಹುಪಾಲು ಬಂದ್ ಮಾಡಿದ್ದು, ಹಲವು ವಿಮಾನಯಾನ ಸಂಸ್ಥೆಗಳು ಮಧ್ಯಪ್ರಾಚ್ಯದ ಹಾರಾಟವನ್ನು ರದ್ದುಗೊಳಿಸಿವೆ. ಈ ಭೀಕರ ದಾಳಿಯಲ್ಲಿ ಖಮೇನಿ ಅವರ ಪುತ್ರಿ, ಅಳಿಯ, ಮೊಮ್ಮಗಳು ಹಾಗೂ ಉನ್ನತ ಸಲಹೆಗಾರ ಅಲಿ ಶಮ್ಖಾನಿ ಮತ್ತು ಕ್ರಾಂತಿಕಾರಿ ಗಾರ್ಡ್ಸ್ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಾಕ್ಪೋರ್ ಕೂಡ ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ಸೇನೆ ಖಚಿತಪಡಿಸಿದೆ.
ಇದನ್ನೂ ಓದಿ : ಇರಾನ್ ನಾಯಕ ಖಮೇನಿ ಮಾತ್ರವಲ್ಲ, ಪುತ್ರಿ, ಅಳಿಯ ಹಾಗೂ ಮೊಮ್ಮಗಳೂ ಬಲಿ



















