ಅಬುಧಾಬಿ : ಇಸ್ರೇಲ್ ದಾಳಿಯ ಬೆನ್ನಲ್ಲೇ ಗಲ್ಫ್ ರಾಷ್ಟ್ರಗಳು ಸೇರಿದಂತೆ ಅಮೆರಿಕದ ಮಿಲಿಟರಿ ನೆಲೆ ಗುರಿಯಾಗಿಸಿಕೊಂಡು ಇರಾನ್ ಪ್ರತಿದಾಳಿ ಮಾಡುತ್ತಿದೆ. ಈ ಮೂಲಕ ಇರಾನ್ ಬರೋಬ್ಬರಿ 8 ರಾಷ್ಟ್ರಗಳ ಮೇಲೆ ಯುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದು, ಅಮೆರಿಕ ಗುಡುಗಿದೆ. ಶಸ್ತ್ರಾಸ್ತ್ರ ಕೆಳಗಿಳಿಸದಿದ್ದರೆ ತಕ್ಕ ಶಾಸ್ತಿ ಎಂದು ಟ್ರಂಪ್ ಗುಡುಗಿದ್ದಾರೆ.
ಈ ನಿಟ್ಟಿನಲ್ಲಿ ಮಧ್ಯಪ್ರಾಚ್ಯದಲ್ಲಿ ಬಹುತೇಕ ಯುದ್ಧ ಶುರುವಾದಂತಾಗಿದೆ. ಅಮೆರಿಕ – ಇಸ್ರೇಲ್ ಜಂಟಿ ದಾಳಿ ಬೆನ್ನಲ್ಲೇ ಇರಾನ್ ಕೂಡ ಆಕ್ರಮಣಕಾರಿ (Iran Strikes) ಹೆಜ್ಜೆ ಇಟ್ಟಿದೆ. ಹೀಗಾಗಿ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸುತ್ತಿದೆ.
ಹೀಗಾಗಿ ಭಾರತೀಯರಿಗೂ ಆತಂಕ ಶುರುವಾಗಿದೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಕತಾರ್, ಬಹ್ರೇನ್ ಮತ್ತು ಜೋರ್ಡಾನ್ ಸೇರಿದಂತೆ ಗಲ್ಫ್ ದೇಶಗಳಲ್ಲಿನ ಅಮೆರಿಕದ ವಾಯುನೆಲೆಗಳ (American air base) ಮತ್ತು ಮಿಲಿಟರಿ ಸೌಲಭ್ಯಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಸದ್ಯದ ಮಾಹಿತಿಯಂದೆ ಗಲ್ಫ್ ರಾಷ್ಟ್ರಗಳಲ್ಲಿ 1 ಕೋಟಿಗೂ ಅಧಿಕ ಭಾರತೀಯರು ನೆಲೆಸಿದ್ದಾರೆ ಎನ್ನಲಾಗಿದೆ.
ಈ ಪೈಕಿ ಯುಎಇ ನಲ್ಲಿ 38.9 ಲಕ್ಷ, ಸೌದಿ ಅರೇಬಿಯಾದಲ್ಲಿ 26.5 ಲಕ್ಷ, ಕುವೈತ್‌ನಲ್ಲಿ 10 ಲಕ್ಷ, ಕತಾರ್ ನಲ್ಲಿ 83 ಲಕ್ಷ, ಒಮನ್‌ನಲ್ಲಿ 66 ಲಕ್ಷ, ಬಹ್ರೇನ್‌ನಲ್ಲಿ 33 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. ಹೀಗಾಗಿ ಕೋಟಿಗೂ ಅಧಿಕ ಭಾರತೀಯರಲ್ಲಿ ಹಾಗೂ ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡುತ್ತಿದೆ.
ಇದನ್ನೂ ಓದಿ : ಇಸ್ರೇಲ್-ಇರಾನ್ ಉದ್ವಿಗ್ನತೆ | ಮಧ್ಯಪ್ರಾಚ್ಯಕ್ಕೆ ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ, ಇಂಡಿಗೊ



















