ಬೆಂಗಳೂರು: ಟಿ20 ಕ್ರಿಕೆಟ್‌ನ ಅತ್ಯಂತ ಸ್ಫೋಟಕ ಬ್ಯಾಟರ್‌ಗಳಲ್ಲಿ ಒಬ್ಬರಾದ ಇಂಗ್ಲೆಂಡ್‌ನ ಮಾಜಿ ನಾಯಕ ಜೋಸ್ ಬಟ್ಲರ್ ಅವರ ವೃತ್ತಿಜೀವನ ಬಹುಶಃ ಕೊನೆಯ ಹಂತಕ್ಕೆ ತಲುಪಿದಂತಿದೆ. ಪ್ರಸ್ತುತ ನಡೆಯುತ್ತಿರುವ 2026ರ ಟಿ20 ವಿಶ್ವಕಪ್‌ನಲ್ಲಿ ಅವರ ಕಳಪೆ ಪ್ರದರ್ಶನ ಮುಂದುವರಿದಿದ್ದು, ಟೂರ್ನಿಯ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆಗಳು ದಟ್ಟವಾಗಿವೆ. ಅವರ ಇತ್ತೀಚಿನ ಅಂಕಿ-ಅಂಶಗಳು ಕ್ರೀಡಾಭಿಮಾನಿಗಳಲ್ಲಿ ಆಘಾತ ಮೂಡಿಸಿವೆ.
ನ್ಯೂಜಿಲೆಂಡ್ ಎದುರು ಇಂಗ್ಲೆಂಡ್‌ಗೆ ಸಂಕಷ್ಟ
ಸೂಪರ್ 8 ಹಂತದ ಗುಂಪು 2ರ ಅತ್ಯಂತ ಪ್ರಮುಖ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಅನ್ನು ಎದುರಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ವೇಗಿ ಜೋಫ್ರಾ ಆರ್ಚರ್ ಮೇಡನ್ ಓವರ್ ಮೂಲಕ ಶ್ರೇಷ್ಠ ಆರಂಭ ಒದಗಿಸಿದರೂ, ಕಿವೀಸ್ ಆರಂಭಿಕರಾದ ಟಿಮ್ ಸೀಫರ್ಟ್ (25 ಎಸೆತಗಳಲ್ಲಿ 35 ರನ್) ಹಾಗೂ ಫಿನ್ ಅಲೆನ್ (19 ಎಸೆತಗಳಲ್ಲಿ 29 ರನ್) ಬಿರುಸಿನ ಆಟವಾಡಿದರು. ಬಳಿಕ ಬಂದ ಗ್ಲೆನ್ ಫಿಲಿಪ್ಸ್ 28 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 39 ರನ್ ಸಿಡಿಸಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ತಂದುಕೊಟ್ಟರು.
160 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ, ಮೊದಲ ಎರಡು ಓವರ್‌ಗಳಲ್ಲೇ ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ನಾಯಕ ಹ್ಯಾರಿ ಬ್ರೂಕ್ ಕೂಡ ಬೇಗನೆ ಪೆವಿಲಿಯನ್ ಸೇರಿದ್ದು, ತಂಡ 58 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡುತ್ತಿದೆ. ಇಂಗ್ಲೆಂಡ್‌ನ ಪ್ರಮುಖ ಬ್ಯಾಟರ್‌ಗಳು ಔಟಾಗಿರುವುದರಿಂದ ಕಿವೀಸ್ ಸ್ಪಿನ್ನರ್‌ಗಳು ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ್ದಾರೆ.
ಬಟ್ಲರ್ ಅವರ ಸತತ ವೈಫಲ್ಯ
ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಶೂನ್ಯಕ್ಕೆ (ಡಕ್ ಔಟ್) ಔಟಾಗುವ ಮೂಲಕ ತೀವ್ರ ನಿರಾಸೆ ಮೂಡಿಸಿದರು. ಇದು ಸತತ ಐದನೇ ಬಾರಿಗೆ ಅವರು ಒಂದಂಕಿ ಮೊತ್ತಕ್ಕೆ (ಸಿಂಗಲ್ ಡಿಜಿಟ್) ವಿಕೆಟ್ ಒಪ್ಪಿಸಿದ ನಿದರ್ಶನವಾಗಿದೆ. ಸ್ಥಳೀಯ ಸ್ಪಿನ್ನರ್‌ಗಳನ್ನು ಎದುರಿಸಿ ನೆಟ್ಸ್‌ನಲ್ಲಿ ಹೆಚ್ಚುವರಿ ಅಭ್ಯಾಸ ನಡೆಸಿದರೂ, ಅವರ ಫಾರ್ಮ್ ಕೈಹಿಡಿದಿಲ್ಲ.
ಪ್ರಸಕ್ತ 2026ರ ಟಿ20 ವಿಶ್ವಕಪ್‌ನಲ್ಲಿ ಅವರು 7 ಇನ್ನಿಂಗ್ಸ್‌ಗಳಿಂದ ಕೇವಲ 35 ಎಸೆತಗಳನ್ನು ಎದುರಿಸಿ 62 ರನ್ ಮಾತ್ರ ಗಳಿಸಿದ್ದಾರೆ (ಸರಾಸರಿ 8.86, ಸ್ಟ್ರೈಕ್ ರೇಟ್ 106.90). ನೇಪಾಳದ ವಿರುದ್ಧದ ಮೊದಲ ಗುಂಪು ಹಂತದ ಪಂದ್ಯದಲ್ಲಿ ಗಳಿಸಿದ 26 ರನ್‌ಗಳೇ ಈ ಟೂರ್ನಿಯಲ್ಲಿ ಅವರ ಗರಿಷ್ಠ ಮೊತ್ತವಾಗಿದೆ ಎಂದರೆ ಅವರ ಕಳಪೆ ಫಾರ್ಮ್‌ನ ಅರಿವಾಗುತ್ತದೆ.
ಐಸಿಸಿ ಟೂರ್ನಿಗಳಲ್ಲಿ ಬಟ್ಲರ್ ಕುಸಿತದ ಅಂಕಿ-ಅಂಶಗಳು
2023ರ ಏಕದಿನ ವಿಶ್ವಕಪ್‌ನಿಂದೀಚೆಗೆ ಐಸಿಸಿ ಟೂರ್ನಿಗಳಲ್ಲಿ ಬಟ್ಲರ್ ಅವರ ಬ್ಯಾಟಿಂಗ್ ಪ್ರದರ್ಶನ ಪಾತಾಳಕ್ಕೆ ಕುಸಿದಿದೆ. ಕಳೆದ ನಾಲ್ಕು ಐಸಿಸಿ ಟೂರ್ನಿಗಳ 26 ಇನ್ನಿಂಗ್ಸ್‌ಗಳಲ್ಲಿ ಅವರು ಬಾರಿಸಿದ್ದು ಕೇವಲ ಒಂದೇ ಒಂದು ಅರ್ಧಶತಕ (ಯುಎಸ್ಎ ವಿರುದ್ಧ ಅಜೇಯ 83 ರನ್). ಈ ನಾಲ್ಕು ಟೂರ್ನಿಗಳಲ್ಲಿ ಅವರ ಒಟ್ಟಾರೆ ಸರಾಸರಿ ಕೇವಲ 17.2 ಆಗಿದೆ.
ಕಳೆದ 4 ಐಸಿಸಿ ಟೂರ್ನಿಗಳಲ್ಲಿ ಅವರ ಪ್ರದರ್ಶನ ಹೀಗಿದೆ:
- 2023ರ ಏಕದಿನ ವಿಶ್ವಕಪ್: 9 ಇನ್ನಿಂಗ್ಸ್, 138 ರನ್, 15.33 ಸರಾಸರಿ, 97.18 ಸ್ಟ್ರೈಕ್ ರೇಟ್.
- 2024ರ ಟಿ20 ವಿಶ್ವಕಪ್: 6 ಇನ್ನಿಂಗ್ಸ್, 131 ರನ್, 26.20 ಸರಾಸರಿ, 135.00 ಸ್ಟ್ರೈಕ್ ರೇಟ್.
- 2025ರ ಚಾಂಪಿಯನ್ಸ್ ಟ್ರೋಫಿ: 3 ಇನ್ನಿಂಗ್ಸ್, 82 ರನ್, 27.33 ಸರಾಸರಿ, 77.36 ಸ್ಟ್ರೈಕ್ ರೇಟ್.
- 2026ರ ಟಿ20 ವಿಶ್ವಕಪ್: 7 ಇನ್ನಿಂಗ್ಸ್, 62 ರನ್, 8.86 ಸರಾಸರಿ, 106.90 ಸ್ಟ್ರೈಕ್ ರೇಟ್.
ಒಂದು ಕಾಲದಲ್ಲಿ ಟಿ20 ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿದ್ದ ದಾಖಲೆ ಬಟ್ಲರ್ ಹೆಸರಿಲ್ಲಿತ್ತು. 2021ರ ಟಿ20 ವಿಶ್ವಕಪ್‌ನಲ್ಲಿ ಅವರು 89.66 ಸರಾಸರಿ ಹೊಂದಿದ್ದರು. ಆದರೆ, ಅದೇ ಆಟಗಾರ 2026ರ ಟಿ20 ವಿಶ್ವಕಪ್‌ನಲ್ಲಿ ಕೇವಲ 8.86 ಸರಾಸರಿ ಹೊಂದುವ ಮೂಲಕ, ಆರಂಭಿಕನೊಬ್ಬನ ಅತಿ ಕಳಪೆ ಸರಾಸರಿಯ ಅನಪೇಕ್ಷಿತ ದಾಖಲೆಗೆ ಕೊರಳೊಡ್ಡಿದ್ದಾರೆ. ಈ ಎಲ್ಲಾ ಆಘಾತಕಾರಿ ಅಂಕಿ-ಅಂಶಗಳು ಜೋಸ್ ಬಟ್ಲರ್ ಅವರ ಸುದೀರ್ಘ ಹಾಗೂ ಸ್ಫೋಟಕ ವೃತ್ತಿಜೀವನ ಅಂತ್ಯದತ್ತ ಸಾಗುತ್ತಿರುವುದರ ಸ್ಪಷ್ಟ ಮುನ್ಸೂಚನೆ ನೀಡುತ್ತಿವೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಸೆಮಿಫೈನಲ್ ರೇಸ್ | ಭಾರತದ ಮುಂದಿನ ಹಾದಿ ಹೇಗಿದೆ? ಇಲ್ಲಿದೆ ಲೆಕ್ಕಾಚಾರ



















