ಕೊಲಂಬೊ | ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಆತಿಥೇಯ ಶ್ರೀಲಂಕಾ ವಿರುದ್ಧ 61 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಪಂದ್ಯದುದ್ದಕ್ಕೂ ಪಾರಮ್ಯ ಮೆರೆದ ಮಿಚೆಲ್ ಸ್ಯಾಂಟ್ನರ್ ಪಡೆ, ಲಂಕಾ ತಂಡದ ಸೆಮಿಫೈನಲ್ ಕನಸನ್ನು ಭಗ್ನಗೊಳಿಸಿದೆ. ಆದರೆ, ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಾಗಿ ನ್ಯೂಜಿಲೆಂಡ್ ಆಟಗಾರ ಗ್ಲೆನ್ ಫಿಲಿಪ್ಸ್ ಲಂಕಾ ಅಭಿಮಾನಿಗಳ ಮುಂದೆ ಪ್ರದರ್ಶಿಸಿದ ‘ನಾಗಿಣಿ ಡ್ಯಾನ್ಸ್’ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಪಂದ್ಯದ ಒಂದು ಹಂತದಲ್ಲಿ ಕಮಿಂದು ಮೆಂಡಿಸ್ ಹೊಡೆದ ಚೆಂಡನ್ನು ಡೀಪ್ ಮಿಡ್-ವಿಕೆಟ್‌ನಲ್ಲಿ ಗ್ಲೆನ್ ಫಿಲಿಪ್ಸ್ ಅತ್ಯದ್ಭುತವಾಗಿ ಕ್ಯಾಚ್ ಪಡೆದರು. ಕ್ಯಾಚ್ ಹಿಡಿದ ತಕ್ಷಣ ಫಿಲಿಪ್ಸ್ ಅವರು ಮೌನಕ್ಕೆ ಶರಣಾಗಿದ್ದ ಲಂಕಾ ಅಭಿಮಾನಿಗಳತ್ತ ತಿರುಗಿ, ಹೀಯಾಳಿಸುವ ರೀತಿಯಲ್ಲಿ ‘ನಾಗಿಣಿ ಡ್ಯಾನ್ಸ್’ ಮಾಡಿದರು. ಸಾಮಾನ್ಯವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ವೈಷಮ್ಯದ ಸಂಕೇತವಾಗಿರುವ ಈ ನೃತ್ಯವನ್ನು ನ್ಯೂಜಿಲೆಂಡ್ ಆಟಗಾರನು ಆತಿಥೇಯರನ್ನೇ ಕೆಣಕಲು ಬಳಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಚಿನ್ ರವೀಂದ್ರ ಸ್ಪಿನ್ ಜಾಲದಲ್ಲಿ ಸಿಲುಕಿದ ಲಂಕಾ
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ಒಂದು ಹಂತದಲ್ಲಿ 84 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ನಾಯಕ ಮಿಚೆಲ್ ಸ್ಯಾಂಟ್ನರ್ (47) ಮತ್ತು ಕೆಳಹಂತದ ಬ್ಯಾಟರ್ ಕೋಲ್ ಮೆಕಾಂಕಿ (31*) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ತಂಡ 168 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾಕ್ಕೆ ರಚಿನ್ ರವೀಂದ್ರ ಎದುರಾದರು. ಕೇವಲ 27 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದ ರಚಿನ್, ಲಂಕಾ ಮಧ್ಯಮ ಕ್ರಮಾಂಕವನ್ನು ಧೂಳೀಪಟ ಮಾಡಿದರು. ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ ಕೇವಲ 107 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪಾಕಿಸ್ತಾನದ ಹಾದಿ ಕಠಿಣ, ನ್ಯೂಜಿಲೆಂಡ್‌ಗೆ ಸುಲಭ ಹಾದಿ
ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡವು ಸೆಮಿಫೈನಲ್ ತಲುಪುವ ತನ್ನ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಗುಂಪು 2 ರಲ್ಲಿ ನ್ಯೂಜಿಲೆಂಡ್ ಈಗ ಉತ್ತಮ ನೆಟ್ ರನ್ ರೇಟ್ (+3.050) ಹೊಂದಿದೆ. ಕಿವೀಸ್ ಪಡೆ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದರೆ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ಇನ್ನೊಂದೆಡೆ, ಪಾಕಿಸ್ತಾನ ತಂಡದ ಸೆಮಿಫೈನಲ್ ಕನಸು ಈಗ ಸಂಪೂರ್ಣವಾಗಿ ನ್ಯೂಜಿಲೆಂಡ್‌ನ ಮುಂದಿನ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಶ್ರೀಲಂಕಾ ತಂಡವು ಶೂನ್ಯ ಅಂಕಗಳೊಂದಿಗೆ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಹಣೆಪಟ್ಟಿ ಹೊತ್ತಿದೆ.
ಇದನ್ನೂ ಓದಿ : ಭೀಕರ ಸರಣಿ ಅಪಘಾತ | ಅಡ್ಡಾದಿಡ್ಡಿ ನುಗ್ಗಿ ಸಿಕ್ಕ ಸಿಕ್ಕ ವಾಹನಕ್ಕೆಲ್ಲ ಡಿಕ್ಕಿ ಹೊಡೆದ ಲಾರಿ!



















