ಬೆಂಗಳೂರು : ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ ಯುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಕಳಪೆ ಪ್ರದರ್ಶನ ಮುಂದುವರಿದಿದ್ದು, ಅವರ ಬ್ಯಾಟಿಂಗ್ ತಂತ್ರಗಾರಿಕೆಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಎಚ್ಚರಿಕೆ ನೀಡಿದ್ದಾರೆ. ಎದುರಾಳಿ ತಂಡಗಳು ನಿರ್ದಿಷ್ಟ ಯೋಜನೆಯೊಂದಿಗೆ ಅಭಿಷೇಕ್ ಅವರನ್ನು ಗುರಿಯಾಗಿಸಿಕೊಳ್ಳುತ್ತಿವೆ, ಒಂದೇ ರೀತಿಯಲ್ಲಿ ಪದೇಪದೇ ವಿಕೆಟ್ ಒಪ್ಪಿಸುತ್ತಿರುವುದು ತಂಡಕ್ಕೆ ಗಂಭೀರ ಸಮಸ್ಯೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಎಡಗೈ ಬ್ಯಾಟರ್ ಆಗಿರುವ ಅಭಿಷೇಕ್ ಶರ್ಮಾ ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ತೀವ್ರ ಪರದಾಡುತ್ತಿದ್ದಾರೆ. ಗ್ರೂಪ್ ಹಂತದ ಪಂದ್ಯಗಳಲ್ಲಿ ಅವರು ಸತತ ಮೂರು ಬಾರಿ ಶೂನ್ಯಕ್ಕೆ (ಹ್ಯಾಟ್ರಿಕ್ ಡಕ್) ಔಟಾಗಿದ್ದರು. ಭಾನುವಾರ (ಫೆಬ್ರವರಿ 22) ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 12 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಭಾರತ 78 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಭಾರತದ ಸತತ 12 ಪಂದ್ಯಗಳ ಅಜೇಯ ಓಟಕ್ಕೂ ದಕ್ಷಿಣ ಆಫ್ರಿಕಾ ಬ್ರೇಕ್ ಹಾಕಿತ್ತು.
“ಎದುರಾಳಿಗಳು ಸ್ಪಷ್ಟ ಯೋಜನೆಯೊಂದಿಗೆ ಬರುತ್ತಿದ್ದಾರೆ”
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಮೊಹಮ್ಮದ್ ಕೈಫ್, ಎದುರಾಳಿ ತಂಡಗಳು ಅಭಿಷೇಕ್ ಶರ್ಮಾ ಅವರ ದೌರ್ಬಲ್ಯವನ್ನು ಅರಿತುಕೊಂಡಿವೆ ಎಂದಿದ್ದಾರೆ. “ಎದುರಾಳಿಗಳು ಅತ್ಯುತ್ತಮ ಸಿದ್ಧತೆಯೊಂದಿಗೆ ಬರುತ್ತಿದ್ದಾರೆ. ಅವರು ಅಭಿಷೇಕ್‌ಗೆ ವೇಗದ ಎಸೆತಗಳನ್ನು ಹಾಕುತ್ತಿಲ್ಲ. ಈ ಪಂದ್ಯದಲ್ಲಿ ನಕಲ್ ಬಾಲ್ ಬಳಸಿ ವಿಕೆಟ್ ಪಡೆದರು. ನಿಧಾನಗತಿಯ ಎಸೆತಗಳನ್ನು ಎದುರಿಸುವಲ್ಲಿ ಶರ್ಮಾ ಅವರ ತಂತ್ರಗಾರಿಕೆ ಬಗ್ಗೆ ನನಗೆ ಆತಂಕವಿದೆ. ಮೊದಲ ಪಂದ್ಯದಲ್ಲಿ ಔಟಾದ ಬಗ್ಗೆ ನನಗೆ ಬೇಸರವಿಲ್ಲ. ಆದರೆ, ನಂತರದ ಪಂದ್ಯಗಳಲ್ಲಿ ಅವರು ಪದೇಪದೇ ಒಂದೇ ರೀತಿಯಲ್ಲಿ ತಮ್ಮ ವಿಕೆಟ್ ಒಪ್ಪಿಸುತ್ತಿರುವ ರೀತಿ ಆತಂಕಕಾರಿ” ಎಂದು ಹೇಳಿದ್ದಾರೆ.
ಭಾರತ ತನ್ನ ಮುಂದಿನ ಸೂಪರ್ 8 ಪಂದ್ಯದಲ್ಲಿ ಗುರುವಾರ (ಫೆಬ್ರವರಿ 26) ಚೆನ್ನೈನಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದಾಗಿದ್ದು, ಅಭಿಷೇಕ್ ಶರ್ಮಾ ಫಾರ್ಮ್‌ಗೆ ಮರಳುವುದು ಟೀಂ ಇಂಡಿಯಾಗೆ ಅತ್ಯಗತ್ಯವಾಗಿದೆ.
ವಿರಾಟ್ ಕೊಹ್ಲಿ ಉದಾಹರಣೆ ನೀಡಿದ ಕೈಫ್
ಸತತ ವೈಫಲ್ಯಗಳ ನಂತರ ಅಭಿಷೇಕ್ ತಮ್ಮ ಆಟದ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿರುವ ಕೈಫ್, 2024ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಎದುರಿಸಿದ್ದ ಸಂಕಷ್ಟವನ್ನು ಉದಾಹರಣೆಯಾಗಿ ನೀಡಿದ್ದಾರೆ. “ಅಭಿಷೇಕ್ ಅತ್ಯಂತ ಸಮರ್ಥ ಮತ್ತು ಆಕ್ರಮಣಕಾರಿ ಬ್ಯಾಟರ್. ಆದರೆ, ಅವರು ಈ ಟೂರ್ನಿಯನ್ನು ಆರಂಭಿಸಿರುವ ರೀತಿ ಬೇಸರ ತರಿಸಿದೆ. ಇದಕ್ಕೆ ವಿರಾಟ್ ಕೊಹ್ಲಿಗಿಂತ ದೊಡ್ಡ ಉದಾಹರಣೆ ಬೇರೊಂದಿಲ್ಲ. ಕೊಹ್ಲಿ ಕೂಡ ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ವಿಫಲರಾಗಿದ್ದರು. ಐಪಿಎಲ್‌ನಲ್ಲಿ 150ರ ಸ್ಟ್ರೈಕ್ ರೇಟ್‌ನಲ್ಲಿ ಆಡಿದ್ದ ಅವರು, ವಿಶ್ವಕಪ್‌ನಲ್ಲೂ ಅದೇ ರೀತಿ ಆಡಲು ಪ್ರಯತ್ನಿಸಿದ್ದರು. ಆದರೆ, ಫೈನಲ್ ಪಂದ್ಯದಲ್ಲಿ ಅವರು ತಮ್ಮ ಆಟದ ಶೈಲಿಯನ್ನು ಬದಲಿಸಿಕೊಂಡು ಕಂಬ್ಯಾಕ್ ಮಾಡಿದರು. ಇದು ಸುಲಭದ ಮಾತಲ್ಲ” ಎಂದು ಕೈಫ್ ವಿವರಿಸಿದ್ದಾರೆ.
“ದ್ವಿಪಕ್ಷೀಯ ಸರಣಿಗಳಲ್ಲಿ ಚೆಂಡನ್ನು ಎರಡು ತುಂಡು ಮಾಡುತ್ತಿದ್ದರು”
ದ್ವಿಪಕ್ಷೀಯ ಸರಣಿ (Bilateral series) ಹಾಗೂ ಐಸಿಸಿ ಟೂರ್ನಿಗಳ ನಡುವೆ ಬಹಳ ವ್ಯತ್ಯಾಸವಿದೆ ಎಂದು ಕೈಫ್ ಹೇಳಿದ್ದಾರೆ. “ವಿಶ್ವಕಪ್ ಮತ್ತು ದ್ವಿಪಕ್ಷೀಯ ಸರಣಿಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ದ್ವಿಪಕ್ಷೀಯ ಸರಣಿಗಳಲ್ಲಿ ಅಭಿಷೇಕ್ ಶರ್ಮಾ ಚೆಂಡನ್ನು ಎರಡು ತುಂಡು ಮಾಡುವಂತೆ ಬಾರಿಸುತ್ತಿದ್ದರು. ಆದರೆ, ಇಲ್ಲಿ ಅವರ ಬ್ಯಾಟ್ ಇನ್ನೂ ಸದ್ದು ಮಾಡಿಲ್ಲ. ಇಲ್ಲಿನ ನಿರೀಕ್ಷೆ ಹಾಗೂ ಒತ್ತಡವೇ ಬೇರೆ ಮಟ್ಟದಲ್ಲಿರುತ್ತದೆ” ಎಂದು ಅವರು ತಿಳಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಸತತ 12 ಪಂದ್ಯಗಳ ಗೆಲುವಿನ ದಾಖಲೆಯ ಬಗ್ಗೆಯೂ ಮಾತನಾಡಿದ ಕೈಫ್, “ಜನರು ಆ ಅಂಕಿ-ಅಂಶಗಳನ್ನು ತೋರಿಸಿ ಸತತ 12 ಪಂದ್ಯಗಳನ್ನು ಗೆದ್ದಿದ್ದೆವು ಎನ್ನುತ್ತಿದ್ದಾರೆ. ಆದರೆ, ಅವೆಲ್ಲ ಕೇವಲ ನಂಬರ್‌ಗಳಷ್ಟೇ. ಆ ಪಂದ್ಯಗಳನ್ನು ಬೇರೆಯವರು ಗೆಲ್ಲಿಸಿಕೊಟ್ಟಿದ್ದರು. ಆಗ ನಾಯಕ ಹಾಗೂ ಕೋಚ್ ಇಬ್ಬರೂ ಬೇರೆಯವರೇ ಆಗಿದ್ದರು. ಹಳೆಯ ದಾಖಲೆಗಳು ಪ್ರಸ್ತುತ ಸವಾಲುಗಳಿಂದ ನಮ್ಮ ಗಮನವನ್ನು ಬೇರೆಡೆ ಸೆಳೆಯಬಾರದು” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ನಟ ರಣವೀರ್ ಸಿಂಗ್‌ಗೆ ರಿಲೀಫ್ | ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ



















