ಕೊಲಂಬೊ: ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ನಮೀಬಿಯಾ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ, ಈ ಮೈಲಿಗಲ್ಲು ತಲುಪಲು ಅವರು ಅನುಸರಿಸಿದ ಹಾದಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಬುಧವಾರ (ಫೆ.18) ನಡೆದ ಪಂದ್ಯದಲ್ಲಿ ಫರ್ಹಾನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಅಂತಿಮ ಓವರ್‌ನಲ್ಲಿ ತಂಡದ ಮೊತ್ತಕ್ಕಿಂತ ವೈಯಕ್ತಿಕ ಶತಕಕ್ಕೆ ಹೆಚ್ಚು ಆದ್ಯತೆ ನೀಡಿದರು ಎಂಬ ಆರೋಪ ಕೇಳಿಬಂದಿದೆ.
ಶತಕದ ಸಂಭ್ರಮದ ನಡುವೆ ವಿವಾದದ ಕಿಡಿ
ಪಾಕಿಸ್ತಾನದ ಇನ್ನಿಂಗ್ಸ್‌ನ 19ನೇ ಓವರ್ ಮುಕ್ತಾಯದ ವೇಳೆಗೆ ತಂಡ 183/3 ರನ್ ಗಳಿಸಿತ್ತು. ಫರ್ಹಾನ್ 99 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅಂತಿಮ ಓವರ್ ಎಸೆಯಲು ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಬಂದರು. ಸ್ಟ್ರೈಕ್‌ನಲ್ಲಿದ್ದ ಶಾದಾಬ್ ಖಾನ್ ಮೊದಲ ಎಸೆತದಲ್ಲೇ ಸಿಂಗಲ್ ತೆಗೆದುಕೊಂಡು ಫರ್ಹಾನ್‌ಗೆ ಸ್ಟ್ರೈಕ್ ನೀಡಿದರು.
ಇಲ್ಲಿಂದ ಫರ್ಹಾನ್ ಸ್ಫೋಟಕ ಆಟಕ್ಕೆ ಮುಂದಾಗುವ ನಿರೀಕ್ಷೆಯಿತ್ತು. ಆದರೆ, ಅವರು ಸುರಕ್ಷಿತವಾಗಿ ಲಾಂಗ್-ಆನ್‌ಗೆ ಚೆಂಡನ್ನು ತಳ್ಳಿ ಸಿಂಗಲ್ ತೆಗೆದುಕೊಂಡು ತಮ್ಮ ಶತಕ ಪೂರೈಸಿಕೊಂಡರು. ಟಿ20 ಪಂದ್ಯದ ಅಂತಿಮ ಓವರ್‌ನಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವ ಬದಲು ಸಿಂಗಲ್ ತೆಗೆದುಕೊಂಡಿದ್ದು ವೀಕ್ಷಕ ವಿವರಣೆಗಾರರ ಅಚ್ಚರಿಗೆ ಕಾರಣವಾಯಿತು.
ಇರ್ಫಾನ್ ಪಠಾಣ್ ಗರಂ
ಈ ಬಗ್ಗೆ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಇರ್ಫಾನ್ ಪಠಾಣ್, “ಅವರು ಶತಕ ಗಳಿಸಿರುವುದು ಖಂಡಿತವಾಗಿಯೂ ಶ್ಲಾಘನೀಯ. ಆದರೆ ಅಂತಿಮ ಓವರ್‌ನಲ್ಲಿ ಸಿಂಗಲ್ ತೆಗೆದುಕೊಂಡಿದ್ದು ನಂಬಲು ಸಾಧ್ಯವಾಗುತ್ತಿಲ್ಲ. ನೀವು ಆಫ್ ಸ್ಪಿನ್ನರ್ ವಿರುದ್ಧ ಆಕ್ರಮಣಕಾರಿ ಆಟವಾಡಬೇಕಿತ್ತು. ಶತಕ ಪೂರೈಸಿದ್ದೀರಿ, ತಂಡ 199 ರನ್ ತಲುಪಿದೆ ಎಂಬ ಖುಷಿ ಇರಬಹುದು. ಆದರೆ ತಂಡದ ಹಿತದೃಷ್ಟಿಯಿಂದ ಕೊನೆಯ ಓವರ್‌ನಲ್ಲಿ ರಕ್ಷಣಾತ್ಮಕ ಆಟ ಆಡುವುದು ಎಷ್ಟರಮಟ್ಟಿಗೆ ಸರಿ?” ಎಂದು ಪ್ರಶ್ನಿಸಿದ್ದಾರೆ. ಫರ್ಹಾನ್ ಶತಕ ಪೂರೈಸಿದ ನಂತರ, ಶಾದಾಬ್ ಖಾನ್ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 199ಕ್ಕೆ ತಲುಪಿಸಿದರು.
ಎಲೈಟ್ ಪಟ್ಟಿಗೆ ಫರ್ಹಾನ್
ವಿವಾದದ ಹೊರತಾಗಿಯೂ, ಸಾಹಿಬ್‌ಜಾದಾ ಫರ್ಹಾನ್ ಟಿ20 ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಪಾಕಿಸ್ತಾನದ ಕೇವಲ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2014ರಲ್ಲಿ ಅಹ್ಮದ್ ಶೆಹಜಾದ್ ಬಾಂಗ್ಲಾದೇಶದ ವಿರುದ್ಧ ಶತಕ (111) ಬಾರಿಸಿದ್ದರು. ಫರ್ಹಾನ್ 57 ಎಸೆತಗಳಲ್ಲಿ ಶತಕ ಪೂರೈಸಿ, ಅಂತಿಮವಾಗಿ 58 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 100 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದನ್ನೂ ಓದಿ : ಹ್ಯಾಟ್ರಿಕ್ ‘ಡಕ್’ ಔಟ್ : ಅಭಿಷೇಕ್ ಶರ್ಮಾ ಕಳಪೆ ಫಾರ್ಮ್ ಕಂಡು ಮರುಗಿದ ಕ್ರಿಕೆಟ್ ಜಗತ್ತು



















