ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ, ಕಾಂಗ್ರೆಸ್ ಜಾಹೀರಾತು ನೀಡಿದ್ದ ಪತ್ರಿಕೆಯ ಮುಖಪುಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಮಾನಹಾನಿ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಇಂದು ಆದೇಶ ಹೊರಡಿಸಿದೆ.
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ ‘ಕರಪ್ಶನ್ ರೇಟ್ ಕಾರ್ಡ್’ ಜಾಹೀರಾತನ್ನು ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದರು. ಈ ವಿಚಾರವಾಗಿ ಅವರ ವಿರುದ್ಧ ದೂರು ದಾಖಲಾಗಿತ್ತು. ಬಿಜೆಪಿ ಪರವಾಗಿ ಕೇಶವಪ್ರಸಾದ್ ಎಂಬವರು ಖಾಸಗಿ ದೂರು ಸಲ್ಲಿಸಿದ್ದರು.
ಖಾಸಗಿ ದೂರಿನ ಆಧಾರದ ಮೇಲೆ ರಾಹುಲ್ ಗಾಂಧಿಗೆ ಸಮನ್ಸ್ ನೀಡಲಾಗಿತ್ತು. ಅದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ, ಪ್ರಕರಣದ ಸ್ವರೂಪ ಮತ್ತು ದಾಖಲೆಗಳನ್ನು ಪರಿಗಣಿಸಿ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದನ್ನೂ ಓದಿ : ಮಾರ್ಚ್ 4ಕ್ಕೆ ಆಪಲ್ ‘ಸ್ಪೆಷಲ್ ಇವೆಂಟ್’ | 50,000 ರೂ. ಬೆಲೆಯ ಮ್ಯಾಕ್‌ಬುಕ್ ಸೇರಿ ಹಲವು ಗ್ಯಾಜೆಟ್ಸ್ ಬಿಡುಗಡೆ ನಿರೀಕ್ಷೆ!



















