ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರ ಸಂಬಳ ಹಾಗೂ ಪಿಂಚಣಿದಾರರ ಪಿಂಚಣಿ ಏರಿಕೆ ದೃಷ್ಟಿಯಿಂದ ಕೇಂದ್ರ ಸರ್ಕಾರವು 8ನೇ ವೇತನ ಆಯೋಗವನ್ನು ರಚಿಸಿದೆ. 8ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾದರೆ 50 ಲಕ್ಷಕ್ಕೂ ಅಧಿಕ ನೌಕರರು ಹಾಗೂ 60 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಇದರ ಬೆನ್ನಲ್ಲೇ, 2025ರ ಡಿಸೆಂಬರ್ 31ಕ್ಕಿಂತ ಮೊದಲು ನಿವೃತ್ತರಾದವರಿಗೆ 8ನೇ ವೇತನ ಆಯೋಗ ಅನ್ವಯವಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
ಹೌದು, 2025ರ ಹಣಕಾಸು ಕಾಯ್ದೆ ಅನ್ವಯ 2025ರ ಡಿಸೆಂಬರ್ 31ಕ್ಕಿಂತ ಮೊದಲು ನಿವೃತ್ತರಾದವರು 8ನೇ ವೇತನ ಆಯೊಗದ ಶಿಫಾರಸುಗಳ ಅನ್ವಯ ಹೆಚ್ಚಿನ ಪಿಂಚಣಿ ಪಡೆಯಲು ಅನರ್ಹರೇ ಎಂಬ ಪ್ರಶ್ನೆಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಸಂಸತ್ತಿನಲ್ಲಿ ಕೇಳಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರವೂ ಸ್ಪಷ್ಟನೆ ನೀಡಿದೆ.
ಸಂಸತ್ತಿನಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರಿಸಿದ್ದಾರೆ. “ಕೇಂದ್ರ ಸರ್ಕಾರವು ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿ ಎಂದು 8ನೇ ವೇತನ ಆಯೋಗವನ್ನು ರಚಿಸಲಾಗಿದೆ. ಅದರ ಶಿಫಾರಸಿನಂತೆ ಎಲ್ಲ ನೌಕರರು ಹಾಗೂ ಪಿಂಚಣಿದಾರರಿಗೆ ವೇತನ ಹಾಗೂ ಪಿಂಚಣಿ ಲಭಿಸಲಿದೆ. ಎಲ್ಲರೂ ಇದಕ್ಕೆ ಒಳಪಡಲಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ 2025ರ ಡಿಸೆಂಬರ್ 31ಕ್ಕಿಂತ ಮೊದಲು ನಿವೃತ್ತರಾದವರು ಕೂಡ ಹೆಚ್ಚಿನ ಪಿಂಚಣಿ ಪಡೆಯಲಿದ್ದಾರೆ ಎಂಬುದು ಖಾತ್ರಿಯಾಗಿದೆ. 2025ರ ಜನವರಿಯಲ್ಲೇ ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ರಚನೆಗೆ ಅನುಮೋದನೆ ನೀಡಿದೆ. ಕೆಲ ತಿಂಗಳ ಹಿಂದೆ ಆಯೋಗವನ್ನು ರಚಿಸಲಾಗಿದ್ದು, ವೇತನದ ಸ್ಟ್ರಕ್ಚರ್ ಕುರಿತು ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ JNCASR ಸಂಸ್ಥೆಯಲ್ಲಿ ನೇಮಕಾತಿ | ಬೆಂಗಳೂರಲ್ಲೇ ಕೆಲಸ, 54 ಸಾವಿರ ರೂ. ಸಂಬಳ


















