ಚೆನ್ನೈ : ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ ‘ಜನನಾಯಕನ್’ (Jana Nayagan) ಬಿಡುಗಡೆಗೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಲೇ ಇದೆ. ಚಿತ್ರ ಬಿಡುಗಡೆ ಇದೀಗ ಮತ್ತೆ ಮುಂದೂಡಲ್ಪಟ್ಟಿದೆ. ಕೆನಡಾದ ವಿತರಕರಾದ ಯಾರ್ಕ್ ಸಿನಿಮಾಸ್ (York Cinemas) ಏಪ್ರಿಲ್ 30ರವರೆಗೆ ಚಿತ್ರ ಬಿಡುಗಡೆಯಾಗುವುದಿಲ್ಲ ಎಂದು ತಿಳಿಸಿದ್ದು, ಇದರಿಂದ ವಿಜಯ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.
ಯಾರ್ಕ್ ಸಿನಿಮಾಸ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ಪ್ರೀತಿಯ ಗ್ರಾಹಕರೇ, ದಯವಿಟ್ಟು ಗಮನಿಸಿ, ‘ಜನನಾಯಕನ್’ ಸಿನಿಮಾ ಏಪ್ರಿಲ್ 30ಕ್ಕೂ ಮೊದಲು ಬಿಡುಗಡೆಯಾಗುವುದಿಲ್ಲ,” ಎಂದು ತಿಳಿಸಿದ್ದಾರೆ. ಆದರೆ, ಬಿಡುಗಡೆ ಯಾವಾಗ ಆಗುತ್ತದೆ ಎಂಬ ದಿನಾಂಕವನ್ನು ಅವರು ಪ್ರಕಟಿಸಿಲ್ಲ. ಈ ಹಿಂದೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 9, 2026ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಮತ್ತು ನಿರ್ಮಾಣ ಹಂತದ ವಿಳಂಬಗಳಿಂದಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.
ಅಭಿಮಾನಿಗಳಲ್ಲಿ ಮುಂದುವರಿದ ಗೊಂದಲ
ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಲ್ಲಿ ವಿತರಕರ ಈ ಘೋಷಣೆ ಮತ್ತೆ ಗೊಂದಲ ಸೃಷ್ಟಿಸಿದೆ. “ಇದು ನಿರ್ಮಾಣ ಸಂಸ್ಥೆಯಿಂದ ಅಧಿಕೃತವಾಗಿ ದೃಢಪಟ್ಟಿದೆಯೇ?” ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು “ಹಾಗಾದರೆ ಮೇ ಅಥವಾ ಜೂನ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆಯೇ?” ಎಂದು ಪ್ರಶ್ನಿಸುತ್ತಿದ್ದಾರೆ. ಚಿತ್ರತಂಡದಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲದಿರುವುದು ಅಭಿಮಾನಿಗಳಲ್ಲಿ ನಿರಾಸೆ ಉಂಟುಮಾಡಿದೆ.
‘ತೆರಿ’ ಮರುಬಿಡುಗಡೆ: ಅಭಿಮಾನಿಗಳಿಗೆ ಸಮಾಧಾನ
‘ಜನನಾಯಕನ್’ ವಿಳಂಬದಿಂದ ನಿರಾಸೆಗೊಂಡಿರುವ ಅಭಿಮಾನಿಗಳಿಗೆ ಸಮಾಧಾನಕರ ಸಂಗತಿಯೆಂದರೆ, ವಿಜಯ್ ಅವರ ಬ್ಲಾಕ್‌ಬಸ್ಟರ್ ಸಿನಿಮಾ ‘ತೆರಿ’ (Theri) ಫೆ.20ರಂದು ಮರುಬಿಡುಗಡೆಯಾಗಲಿದೆ. 2016ರಲ್ಲಿ ತೆರೆಕಂಡಿದ್ದ ಈ ಚಿತ್ರವನ್ನು ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ವಿಜಯ್ ಅವರ ಕೊನೆಯ ಚಿತ್ರವೆನ್ನಲಾದ ‘ಜನನಾಯಕನ್’ ಮೇಲಿನ ನಿರೀಕ್ಷೆ ದಿನೇದಿನೇ ಹೆಚ್ಚುತ್ತಿದ್ದು, ಚಿತ್ರತಂಡದ ಮುಂದಿನ ನಡೆ ಏನು ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಇದನ್ನೂ ಓದಿ : ಬಾಂಗ್ಲಾ ನೂತನ ಪ್ರಧಾನಿ ಪ್ರಮಾಣ ವಚನ | ಮೋದಿಗಿದೆ ಆಹ್ವಾನ.. ಆದರೆ ಭಾಗಿಯಾಗುವುದು ಅನುಮಾನ!



















