ಹಾಸನ : ಮದುವೆಗೆ ತೆರಳಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತುಮಕೂರು ಜಿಲ್ಲೆ ಕುಣಿಗಲ್ನಲ್ಲಿ ಪ್ರಿಯಾಂಕಾ ಪತ್ತೆಯಾಗಿದ್ದಾರೆ. ಸಿಸಿಟಿವಿ ದೃಶ್ಯವಳಿಗಳ ಆಧಾರದಲ್ಲಿ ಕುಣಿಗಲ್ನ ಗೊಟ್ಟಿಕೆರೆಯಲ್ಲಿ ಡೇವಿಡ್ ಎಂಬಾತನ ಮನೆಯಲ್ಲಿ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದು, ಬೇಲೂರು ಪೊಲೀಸರಿಗೆ ಸ್ಥಳೀಯ ಪೊಲೀಸರು ಕೂಡ ಈ ವೇಳೆ ಸಾಥ್ ನೀಡಿದ್ದಾರೆ. ಸ್ನೇಹಿತ ಡೇವಿಡ್ ಮನೆಯಲ್ಲಿಯೇ ಪ್ರಿಯಾಂಕಾ ಎರಡು ದಿನಗಳಿಂದ ವಾಸವಿದ್ದರು ಎನ್ನಲಾಗಿದ್ದು, ಅನೈತಿಕ ಸಂಬಂಧ ಶಂಕೆ ವ್ಯಕ್ತವಾಗಿದೆ.
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಸೀನ್ ಕ್ರಿಯೇಟ್ ಮಾಡಿ ಪ್ರೀಯಾಂಕಾ ನಾಪತ್ತೆಯಾಗಿದ್ದ ಹಿನ್ನೆಲೆ ಪ್ರಕರಣ ಬೇಲೂರು ಪೊಲೀಸರಿಗೆ ತಲೆನೋವು ತಂದಿತ್ತು. ಆದರೆ ಪೊಲೀಸರ ಸತತ ಪ್ರಯತ್ನದಿಂದ ಪತಿಯ ಸ್ನೇಹಿತನಾಗಿರುವ ಡೇವಿಡ್ ಮನೆಯಲ್ಲಿ ಕೊನೆಗೂ ಮಹಿಳೆಯ ಪತ್ತೆಯಾಗಿದೆ. ಕುಣಿಗಲ್ ಪಟ್ಟಣದ ಗೊಟ್ಟಿಕೆರೆಯಲ್ಲಿ ವಾಸವಾಗಿದ್ದ ಡೇವಿಡ್ ಪಟ್ಟಣದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ತನಿಖೆ ವೇಳೆ ಸಿಕ್ಕಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕಾ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆಂದು ಬಂದಿದ್ದು, ಬಳಿಕ ಕಾಣೆಯಾಗಿದ್ದಳು. ಫೆಬ್ರವರಿ 12ರ ರಾತ್ರಿ 8 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಬೇಲೂರು ಬಸ್ ನಿಲ್ದಾಣದ ಬಳಿಯಿಂದ ಈಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು.
ಘಟನೆಗೂ ಮುನ್ನ ಸಂಜೆ 7.30ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಪ್ರಿಯಾಂಕಾ, ‘ಯಾರೋ ಒಬ್ಬರ ಜೊತೆಯಲ್ಲಿ ಸಿಕ್ಕಿದ್ದೇನೆ’ ಎಂದು ಹೇಳಿ ಫೋನ್ ಕಟ್ ಮಾಡಿದ್ದಳು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ಮಹಿಳೆಯ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಪ್ರಕರಣದ ಬಗ್ಗೆ ಮತ್ತಷ್ಟು ಸಂಶಯ ಮೂಡುವಂತೆ ಮಾಡಿತ್ತು.
ಇದನ್ನೂ ಓದಿ : ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶವವಾಗಿ ಪತ್ತೆ!



















