ಬೆಂಗಳೂರು : ರಾಜ್ಯದಲ್ಲಿರುವ ಭ್ರಷ್ಟ, ಕೆಟ್ಟ ಸರ್ಕಾರವನ್ನು ತೆಗೆಯೋದೇ ನನ್ನ ಅಜೆಂಡಾ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ 113 ಸ್ಥಾನ ಪಡೆದು ಕುಮಾರಸ್ವಾಮಿ ಬೇಕಾದ್ರೆ ಸಿಎಂ ಆಗಲಿ ಎಂಬ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ, ನಾನು ಇಲ್ಲಿವರೆಗೂ ನಿಮ್ಮ ಮುಂದೆ ನೂರು ಬಾರಿ ಹೇಳಿದ್ದೇನೆ. ರಾಜ್ಯದಲ್ಲಿ ಇರೋ ಇಂತಹ ಭ್ರಷ್ಟ, ಕೆಟ್ಟ ಸರ್ಕಾರ ತೆಗೆಯಬೇಕು ಅನ್ನೋದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಆಗೋದೆಲ್ಲ ಆಮೇಲೆ. ಈ ರಾಜ್ಯದಲ್ಲಿ ಉತ್ತಮವಾದ ಸರ್ಕಾರ, ಜನಪರವಾದ ಸರ್ಕಾರ, ಜನತಾ ಸರ್ಕಾರ ಬರಬೇಕು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.
ಜನರ ಭಾವನೆಗೆ ಸ್ಪಂದಿಸುವ ಸರ್ಕಾರ ಬೇಕು. ಇಂತಹ ಭ್ರಷ್ಟ ಸರ್ಕಾರ ತೆಗೆಯಬೇಕು ಎಂಬುದು ನನ್ನ ಅಜೆಂಡಾ. ಇಲ್ಲಿ ಮುಖ್ಯಮಂತ್ರಿ ಯಾರು ಆಗ್ತಾರೆ ಎನ್ನುವುದು ಅಲ್ಲ. ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಸಿದ್ರು ಅಂತ ಯಾಕೆ ಬೇಕು. ಇನ್ನೂ ಎರಡು ವರ್ಷ ಇದೆ. ಬಹಳ ಶ್ರಮ ಹಾಕೋದಿದೆ. ಯಾರೋ ನಾಲ್ಕು ಜನ ಮಾತಾಡಿದ್ದಕ್ಕೆ ಉತ್ತರ ಕೊಟ್ಟರೆ ಅದಕ್ಕೆ ಪ್ರಬುದ್ಧತೆ ಇಲ್ಲ ಅಂತಾರೆ ಎಂದು ತಿಳಿಸಿದ್ದಾರೆ.
ಜಿಬಿಎ ಚುನಾವಣೆ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್‌ಡಿಕೆ, ಜಿಬಿಎ ಚುನಾವಣೆ ಮೈತ್ರಿ ಆಗೋ ಬಗ್ಗೆ ಈವರೆಗೂ ಯಾವುದೇ ಚರ್ಚೆ ಆಗಿಲ್ಲ. ಎಲ್ಲಾ ಪಕ್ಷಗಳು ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಚುನಾವಣೆ ಆಗ್ತಿದೆ. ನಮ್ಮ ಪಕ್ಷ ಜಿಬಿಎ ವಿಷಯದಲ್ಲಿ ಏನೇನು ನಿರ್ಧಾರ ಮಾಡಬೇಕು ಅಂತ ಇವತ್ತು ಸಭೆಯಲ್ಲಿ ಚರ್ಚೆ ಮಾಡ್ತೀವಿ. ಮೈತ್ರಿ ವಿಷಯದ ಬಗ್ಗೆ ಈ ಕ್ಷಣದವರೆಗೆ ನಾವೇನು ಚರ್ಚೆ ಮಾಡಿಲ್ಲ. ಚರ್ಚೆ ಸಮಯ ಬಂದಾಗ ಅದರ ಬಗ್ಗೆ ಚರ್ಚೆ ಮಾಡ್ತೀವಿ. ಮೈತ್ರಿ ವಿಷಯದಲ್ಲಿ ನಾವು ಸಂಪೂರ್ಣವಾಗಿ ಮುಕ್ತವಾಗಿ ಇದ್ದೇವೆ. ಯಾವುದೇ ರೀತಿಯಲ್ಲಿ ನಮ್ಮಿಂದ ಜನರಲ್ಲಿ ಬೇರೆ ರೀತಿ ಗೊಂದಲಗಳಿಗೆ ಅವಕಾಶ ಕೊಡಬಾರದು ಎನ್ನೋದು ನಮ್ಮ ನಿಲುವು. ಸಮಯ ಬಂದಾಗ ಈ ಬಗ್ಗೆ ಚರ್ಚೆ ಮಾಡ್ತೀವಿ ಎಂದಿದ್ದಾರೆ.
ಇದನ್ನೂ ಓದಿ : ‘ಬ್ಯಾಟಿಂಗ್ ಪಿಚ್’ ಕೇಳಿದ ಹಾರ್ದಿಕ್‌ಗೆ ಟಾಂಗ್ ನೀಡಿದ ಹರ್ಷಲ್ ಗಿಬ್ಸ್ | ‘ಡೇಂಜರಸ್’ ಆಟಗಾರರು ಪಿಚ್ ಬಗ್ಗೆ ದೂರುವುದಿಲ್ಲ!


















