ಮಂಗಳೂರು: ಫೆಬ್ರವರಿ 14ರಂದು ಆಚರಿಸಲಾಗುವ ‘ವ್ಯಾಲೆಂಟೈನ್ ಡೇ’ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮನವಿಯನ್ನು ಚುನಾವಣಾ ತಹಶೀಲ್ದಾರ್ ಶ್ರೀ ದಯಾನಂದ ಅವರ ಮೂಲಕ ಸಲ್ಲಿಸಲಾಗಿದೆ.
ಸಂಘಟನೆಯ ಪ್ರತಿನಿಧಿಗಳು, ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದಿರುವ ಈ ಆಚರಣೆಯ ಪರಿಣಾಮವಾಗಿ ಯುವಪೀಳಿಗೆ ಮೇಲೆ ಅನಾನುಕೂಲಕರ ಪರಿಣಾಮಗಳು ಉಂಟಾಗುತ್ತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವಿಶೇಷವಾಗಿ ‘ವ್ಯಾಲೆಂಟೈನ್ ಡೇ’ ಸಂದರ್ಭದಲ್ಲಿ ಯುವತಿಯರ ಮೇಲಿನ ಕಿರುಕುಳ, ಹಿಂಸಾತ್ಮಕ ಘಟನೆಗಳು ಹಾಗೂ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.
ಈ ಸಂದರ್ಭದಲ್ಲಿ ವಕೀಲರಾದ ಶ್ರೀ ಈಶ್ವರ ಕೊಟ್ಟಾರಿ ಬಜಾಲ್, ಶ್ರೀ ಉಪೇಂದ್ರ ಆಚಾರ್ಯ, ಶ್ರೀ ರೋಹಿತ್ ಕೋಟ್ಯಾನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಅಲ್ಲದೆ ಹಿಂದೂ ಮಹಾಸಭಾ – ಕರ್ನಾಟಕ ರಾಜ್ಯ ಅಧ್ಯಕ್ಷ ಡಾ. ಎಲ್. ಕೆ. ಸುವರ್ಣ, ರಾಜ್ಯ ಖಜಾಂಚಿ ಶ್ರೀ ಲೋಕೇಶ್ ಉಳ್ಳಾಲ್ ಹಾಗೂ ಇತರ ಧರ್ಮಾಭಿಮಾನಿಗಳು ಭಾಗವಹಿಸಿದ್ದರು.
ಮನವಿಯಲ್ಲಿ ‘ವ್ಯಾಲೆಂಟೈನ್ ಡೇ’ ವೇಳೆ ಆಯೋಜಿಸಲಾಗುವ ಕೂಟಗಳಲ್ಲಿ ಮದ್ಯಪಾನ, ಧೂಮಪಾನ ಮತ್ತು ಮಾದಕ ವಸ್ತುಗಳ ಬಳಕೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಇದೇ ಸಂದರ್ಭದಲ್ಲಿ ಅತಿವೇಗದ ವಾಹನ ಚಾಲನೆ, ಕಿರುಕುಳ ಪ್ರಕರಣಗಳು ಹಾಗೂ ಮೋಸ ಪ್ರಕರಣಗಳ ಬಗ್ಗೆ ಕಠಿಣ ನಿಗಾ ವಹಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಲಾಗಿದೆ.
ಫೆಬ್ರವರಿ 14ರಂದು ನಗರದಲ್ಲಿ ವಿಶೇಷ ಪೊಲೀಸ್ ಪಥಕಗಳನ್ನು ನಿಯೋಜಿಸಿ, ಕಾಲೇಜು ಆವರಣಗಳಲ್ಲಿ ಕಾನೂನು ವಿರೋಧಿ ಕೃತ್ಯಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು. ಅತಿವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆಪತ್ತಿನ ಸಂದರ್ಭಗಳಲ್ಲಿ ಯುವತಿಯರಿಗೆ ತಕ್ಷಣ ಸಹಾಯ ದೊರಕುವಂತೆ ವಿಶೇಷ ಸಹಾಯವಾಣಿ ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಮಾವನಿಂದಲೇ ಸೊಸೆಗೆ ಲೈಂಗಿಕ ಕಿರುಕುಳ ಕೇಸ್ | ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಮಹಿಳಾ ಆಯೋಗ ಸೂಚನೆ!



















