ಬೆಂಗಳೂರು: ರಾಜ್ಯದಲ್ಲಿ ವಾಯು ಗುಣಮಟ್ಟ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಕೆಲ ನಗರಗಳಲ್ಲಿ ಚೇತರಿಕೆ ಕಂಡುಬಂದರೆ, ಇನ್ನೂ ಕೆಲವೆಡೆ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಏಕಾಏಕಿ ಸುಧಾರಣೆ ಕಂಡುಬಂದಿದ್ದರೆ, ಮಂಗಳೂರಿನಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ (AQI) 200ರ ಗಡಿಗೆ ತಲುಪಿದ್ದು ಆತಂಕ ಮೂಡಿಸಿದೆ.
ಕೆಲ ದಿನಗಳ ಹಿಂದಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 137ಕ್ಕೆ ತಲುಪಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡುಬಂದಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಇನ್ನೂ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ಇನ್ನೊಂದೆಡೆ, ಮೂರು–ನಾಲ್ಕು ದಿನಗಳ ಹಿಂದೆ 100ರ ಆಸುಪಾಸಿನಲ್ಲಿದ್ದ ಮಂಗಳೂರಿನ AQI ಇಂದು 199ಕ್ಕೆ ತಲುಪಿದ್ದು ಅಚ್ಚರಿ ಮೂಡಿಸಿದೆ. ಇದೇ ಸ್ಥಿತಿ ಮುಂದುವರೆದರೆ ಮಂಗಳೂರು ಕೂಡ ದೆಹಲಿಯಂತೆಯೇ ತೀವ್ರ ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿ ಮತ್ತು ಶಿವಮೊಗ್ಗದಲ್ಲೂ ವಾಯು ಗುಣಮಟ್ಟ ಹದಗೆಟ್ಟಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ತಜ್ಞರ ಪ್ರಕಾರ, PM2.5 ಎನ್ನುವುದು ಮಾನವನ ಕೂದಲಿನ ದಪ್ಪದ ಕೇವಲ ಶೇ. 3ರಷ್ಟು ಮಾತ್ರ ಇರುವ ಅತಿ ಸೂಕ್ಷ್ಮ ಕಣಗಳಾಗಿದ್ದು, ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತವನ್ನು ಸೇರುತ್ತವೆ. ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಆಗಿದ್ದು, PM10 ಪ್ರಮಾಣ 109ಕ್ಕೆ ಏರಿಕೆಯಾಗಿದೆ. ಈ ಕಣಗಳು ಉಸಿರಾಟ ವ್ಯವಸ್ಥೆಗೆ ಗಂಭೀರ ಹೊಡೆತ ನೀಡುತ್ತವೆ.
ರಾಜ್ಯದ ವಿವಿಧ ಭಾಗಗಳಲ್ಲಿ ವಾಯು ಗುಣಮಟ್ಟದಲ್ಲಿ ಕಂಡುಬರುವ ಈ ಏರುಪೇರಿನ ನಡುವೆ, ಮಕ್ಕಳೂ, ವೃದ್ಧರೂ ಹಾಗೂ ದೀರ್ಘಕಾಲೀನ ಕಾಯಿಲೆ ಹೊಂದಿರುವವರು ವಿಶೇಷ ಎಚ್ಚರಿಕೆ ವಹಿಸುವಂತೆ ತಜ್ಞರು ಸೂಚಿಸಿದ್ದಾರೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
- ಬೆಂಗಳೂರು –137
- ಮಂಗಳೂರು-199
- ಮೈಸೂರು –144
- ಬೆಳಗಾವಿ – 135
- ಕಲಬುರ್ಗಿ-152
- ಶಿವಮೊಗ್ಗ – 166
- ಬಳ್ಳಾರಿ – 179
- ಹುಬ್ಬಳ್ಳಿ- 97
- ಉಡುಪಿ –164
- ವಿಜಯಪುರ –154
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
ಇದನ್ನೂ ಓದಿ : ಅಧಿವೇಶನ ಮುಗಿದ ಬೆನ್ನಲ್ಲೇ ಸಚಿವರಿಗೆ ಅನುದಾನ ಅಲರ್ಟ್ | ಬಜೆಟ್ ಮೇಲೆ ಕಣ್ಣಿಟ್ಟ ಸಚಿವರು



















