ಬೆಂಗಳೂರು | ದುನಿಯಾ ವಿಜಯ್ ಅಭಿನಯದ ʻಲ್ಯಾಂಡ್‌ಲಾರ್ಡ್ʼ ಸಿನಿಮಾವು ಕಳೆದ ತಿಂಗಳು 23ರಂದು ತೆರೆಕಂಡಿತ್ತು. ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ಕುರಿತ ಕಥಾಹಂದರವುಳ್ಳ ಈ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಈ ಸಿನಿಮಾಕ್ಕೆ ರಾಜ್ಯ ಸರ್ಕಾರವು ತೆರಿಗೆ ವಿನಾಯಿತಿ ನೀಡಿದೆ.
ದುನಿಯಾ ವಿಜಯ್, ರಚಿತಾ ರಾಮ್, ರಿತನ್ಯಾ, ರಾಜ್ ಬಿ ಶೆಟ್ಟಿ ಮುಂತಾದವರು ನಟಿಸಿರುವ ʻಲ್ಯಾಂಡ್‌ಲಾರ್ಡ್ʼ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ʻಲ್ಯಾಂಡ್‌ಲಾರ್ಡ್ʼ ಸಿನಿಮಾವು ತೆರೆಗೆ ಬರುವುದಕ್ಕೂ ಮುನ್ನವೇ ವಿಜಯ್, ನಿರ್ದೇಶಕ ಜಡೇಶ್ ಕೆ ಹಂಪಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದರು. ತಮ್ಮ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದರು. ಇದೀಗ ರಾಜ್ಯ ಸರ್ಕಾರವು ತೆರಿಗೆ ವಿನಾಯಿತಿ ಘೋಷಿಸಿದೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
“ಸಾಮಾಜಿಕ ಅಸಮಾನತೆ ಮತ್ತು ಜಾತಿಯಾಧಾರಿತ ಶೋಷಣೆ ವಿಷಯಾಧಾರಿತ ದುನಿಯಾ ವಿಜಯ್ ನಾಯಕತ್ವದ “ಲ್ಯಾಂಡ್ ಲಾರ್ಡ್” ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನೆಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಸಿನೆಮಾವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ. ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಲ್ಯಾಂಡ್ ಲಾರ್ಡ್ ನಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ನಮ್ಮ ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂದು ನಂಬಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ತೆರಿಗೆ ವಿನಾಯಿತಿ ಲಾಭವೇನು?
ಸಾಮಾನ್ಯವಾಗಿ ಸಿನಿಮಾದ ಟಿಕೆಟ್ ಮೇಲೆ 12% ಅಥವಾ 18% ಜಿಎಸ್‌ಟಿ ಇರುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು (SGST) ಅರ್ಧದಷ್ಟಿರುತ್ತದೆ. ಸರ್ಕಾರ ತೆರಿಗೆ ವಿನಾಯಿತಿ ನೀಡಿದರೆ, ಟಿಕೆಟ್ ಬೆಲೆ ಕಡಿಮೆಯಾಗುತ್ತದೆ. ಇದರಿಂದ ಸಾಮಾನ್ಯ ಪ್ರೇಕ್ಷಕರಿಗೆ ಕಡಿಮೆ ದರದಲ್ಲಿ ಸಿನಿಮಾ ನೋಡುವ ಅವಕಾಶ ಸಿಗುತ್ತದೆ. ಟಿಕೆಟ್ ದರ ಕಡಿಮೆಯಾದರೆ, ಸಹಜವಾಗಿಯೇ ಹೆಚ್ಚು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ದುಬಾರಿ ಟಿಕೆಟ್ ಕಾರಣಕ್ಕೆ ಸಿನಿಮಾ ನೋಡಲು ಹಿಂದೇಟು ಹಾಕುವ ಮಧ್ಯಮ ವರ್ಗದವರು ಥಿಯೇಟರ್‌ಗೆ ಬರಲು ಇದು ಉತ್ತೇಜನ ನೀಡಿದಂತೆ ಆಗುತ್ತದೆ. ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದಾಗ, ರಾಜ್ಯ ಸರ್ಕಾರಕ್ಕೆ ಚಿತ್ರತಂಡ ಕಟ್ಟಬೇಕಾದ ಎಸ್‌ಜಿಎಸ್‌ಟಿ ಮನ್ನಾ ಆದಂತೆ ಆಗಲಿದೆ.
ಇದನ್ನೂ ಓದಿ : ಕಾಯಬೇಕಾದ ಮುಜರಾಯಿ ಅಧಿಕಾರಿಗಳೇ ಧರ್ಮರಾಯಸ್ವಾಮಿ ಆಭರಣ ಕದ್ದ ಆರೋಪ | ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಗಂಭೀರ ಆಪಾದನೆ!



















