ಇಸ್ಲಾಮಾಬಾದ್: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ತಮ್ಮ ದೇಶದ ದಯನೀಯ ಸ್ಥಿತಿಯ ಬಗ್ಗೆ ಅತ್ಯಂತ ಆಘಾತಕಾರಿ ಮತ್ತು ಭಾವುಕ ಹೇಳಿಕೆಯೊಂದನ್ನು ನೀಡಿದ್ದಾರೆ. “ನಾನು ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜಗತ್ತಿನಾದ್ಯಂತ ಸಾಲಕ್ಕಾಗಿ ಕೈಚಾಚುತ್ತಾ ಅಲೆಯುತ್ತಿದ್ದೇವೆ. ಇದೊಂದು ದೊಡ್ಡ ರಾಷ್ಟ್ರೀಯ ಅವಮಾನ” ಎಂದು ಅವರು ಒಪ್ಪಿಕೊಂಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ಉದ್ಯಮಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ‘ಭಿಕ್ಷಾಟನೆ’ಯ ಪ್ರವೃತ್ತಿ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಆರ್ಥಿಕತೆಯು ಸಂಪೂರ್ಣವಾಗಿ ವಿದೇಶಿ ಸಾಲ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ. ಸದ್ಯ ಪಾಕಿಸ್ತಾನವು ಸುಮಾರು 80 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ (ಪಾಕಿಸ್ತಾನಿ ರೂಪಾಯಿ) ಹೆಚ್ಚು ಸಾಲದ ಹೊರೆ ಹೊತ್ತಿದೆ. “ನಾವು ಸಾಲಕ್ಕಾಗಿ ಇತರ ದೇಶಗಳ ಮುಂದೆ ಹೋದಾಗ ನಮ್ಮ ತಲೆ ತಗ್ಗಿಸುವಂತಾಗುತ್ತದೆ. ನಾವು ಯಾರಿಂದ ಸಾಲ ಪಡೆಯುತ್ತೇವೆಯೋ, ಅವರ ಹಲವು ಷರತ್ತುಗಳಿಗೆ ಅನಿವಾರ್ಯವಾಗಿ ಒಪ್ಪಬೇಕಾಗುತ್ತದೆ. ಇದರಿಂದ ನಾವು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಶೆಹಬಾಜ್ ಷರೀಫ್ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.
ವಿಶೇಷವೆಂದರೆ, ಪಾಕಿಸ್ತಾನದ ಸಾಲದ ಮಾತುಕತೆಗಳಲ್ಲಿ ನಾಗರಿಕ ಸರ್ಕಾರದ ಜೊತೆಗೆ ಸೇನಾ ಮುಖ್ಯಸ್ಥರು ಪಾಲ್ಗೊಳ್ಳುತ್ತಿರುವುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾಲ ನೀಡುವ ದೇಶಗಳಿಗೆ ಭರವಸೆ ನೀಡಲು ಸೇನೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆಗಳ ನಡುವೆಯೇ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಚೀನಾ, ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ದೇಶಗಳು ಪಾಕಿಸ್ತಾನಕ್ಕೆ ಆಪತ್ಬಾಂಧವರಂತೆ ನೆರವು ನೀಡುತ್ತಿದ್ದರೂ, ಆ ಸಾಲದ ಹಣವು ಕೇವಲ ಹಳೆಯ ಸಾಲಗಳ ಬಡ್ಡಿ ತೀರಿಸುವುದಕ್ಕೇ ಬಳಕೆಯಾಗುತ್ತಿರುವುದು ದೇಶದ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ನಿರುದ್ಯೋಗ ಮತ್ತು ಬಡತನದ ತಾಂಡವ
ಕೇವಲ ಸಾಲ ಮಾತ್ರವಲ್ಲದೆ, ಪಾಕಿಸ್ತಾನದ ಆಂತರಿಕ ಪರಿಸ್ಥಿತಿಯೂ ಶೋಚನೀಯವಾಗಿದೆ. ದೇಶದಲ್ಲಿ ಬಡತನದ ಪ್ರಮಾಣ ಶೇಕಡಾ 45ಕ್ಕೆ ಏರಿಕೆಯಾಗಿದ್ದು, ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡದಿರುವುದು ಹಾಗೂ ಕೇವಲ ಬಟ್ಟೆ ಉದ್ಯಮದ ಮೇಲೆ ಅವಲಂಬಿತವಾಗಿರುವುದು ದೇಶದ ಆರ್ಥಿಕ ಪತನಕ್ಕೆ ಕಾರಣ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಒಂದು ಕಾಲದಲ್ಲಿ ಭೌಗೋಳಿಕ ರಾಜಕೀಯವನ್ನು ಬಳಸಿಕೊಂಡು ಹಣ ಪಡೆಯುತ್ತಿದ್ದ ಪಾಕಿಸ್ತಾನಕ್ಕೆ ಈಗ ಆ ದಾರಿಯೂ ಮುಚ್ಚಿಹೋಗಿದ್ದು, ಭವಿಷ್ಯದ ಹಾದಿ ಅತ್ಯಂತ ಕಠಿಣವಾಗಿದೆ.
ಇದನ್ನೂ ಓದಿ: ತೆರೆಮರೆಯ ಸಮಾಜಸೇವೆಯಿಂದ ಮೊದಲ ಮಹಿಳಾ ಡಿಸಿಎಂ ಹುದ್ದೆಯವರೆಗೆ…| ಮಹಾರಾಷ್ಟ್ರದಲ್ಲಿ ಸುನೇತ್ರಾ ಪರ್ವ ಶುರು



















