ಬೆಂಗಳೂರು: ನೀವು ಈಗ ಎಸ್ಸೆಸ್ಸೆಲ್ಸಿ ಅಧ್ಯಯನ ಮಾಡುತ್ತಿದ್ದೀರಾ? ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೀರಾ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ನೀವು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದು, ತಾಲೂಕಿಗೇ ರ್ಯಾಂಕ್ ಬಂದರೆ, ನಿಮಗೆ ರಾಜ್ಯ ಸರ್ಕಾರವು 50 ಸಾವಿರ ರೂಪಾಯಿ ನಗದು ನೀಡಲಿದೆ. ಹೌದು, ಇದುವರೆಗೆ ಎಸ್ಸೆಸ್ಸೆಲ್ಸಿಯಲ್ಲಿ ಟಾಪ್ ಬಂದವರಿಗೆ ಲ್ಯಾಪ್ ಟಾಪ್ ನೀಡಲಾಗುತ್ತಿತ್ತು. ಈಗ ರಾಜ್ಯ ಸರ್ಕಾರವು 50 ಸಾವಿರ ರೂಪಾಯಿ ನೀಡಲು ತೀರ್ಮಾನಿಸಿದೆ.
ಇದಕ್ಕೂ ಮೊದಲು ರಾಜ್ಯ ಸರ್ಕಾರವು ಟಾಪರ್ ಗಳಿಗೆ ಲ್ಯಾಪ್ ಟಾಪ್ ನೀಡುತ್ತಿತ್ತು. ಆದರೆ, ಸರ್ಕಾರ ನೀಡುವ ಲ್ಯಾಪ್ ಟಾಪ್ ಗಳು ಗುಣಮಟ್ಟದ್ದಾಗಿಲ್ಲ. ಅವು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್ ಡೇಟ್ ಆಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಬದಲು, ನೇರವಾಗಿ ಹಣ ನೀಡಲು ತೀರ್ಮಾನಿಸಿದೆ. ಈ ಹಣದಿಂದ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಲ್ಯಾಪ್ ಟಾಪ್ ಖರೀದಿಸಲಿ ಎಂಬುದು ರಾಜ್ಯ ಸರ್ಕಾರದ ಆಶಯವಾಗಿದೆ.
ಯಾರಿಗೆಲ್ಲ ಸಿಗಲಿದೆ 50 ಸಾವಿರ ರೂಪಾಯಿ?
ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ 50 ಸಾವಿರ ರೂಪಾಯಿ ನೀಡಲಾಗುತ್ತದೆ. ರಾಜ್ಯದ ಪ್ರತಿ ತಾಲೂಕಿನ ಮೂವರು ಟಾಪರ್ ಗಳಿಗೆ ಹಾಗೂ ಪ್ರತಿ ಜಿಲ್ಲೆಯ ಮೂರು ಟಾಪರ್ ಗಳಿಗೆ ನಗದು ಬಹುಮಾನ ಲಭಿಸಲಿದೆ. ರಾಜ್ಯದ ಒಟ್ಟು 758 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ತಲಾ 50 ಸಾವಿರ ರೂಪಾಯಿ ನಗದು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ. ಲ್ಯಾಪ್ ಟಾಪ್ ಬದಲು ನಗದು ನೀಡಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮನವಿಯ ಹಿನ್ನೆಲೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಫೆಬ್ರವರಿ 1ರಿಂದ ನಿಮ್ಮ ಜೇಬಿಗೆ ಭಾರವಾಗಲಿವೆ ಬದಲಾವಣೆಗಳು | ಹೊಸ ನಿಯಮ ತಿಳಿದುಕೊಳ್ಳಿ



















