ಬೆಂಗಳೂರು: ಪ್ರತಿ ತಿಂಗಳ ಮೊದಲ ತಾರೀಖಿನಂದು ಒಂದಲ್ಲ ಒಂದು ಹಣಕಾಸು ನಿಯಮಗಳು ಬದಲಾಗುತ್ತಲೇ ಇರುತ್ತವೆ. ಅದರಂತೆ, ಫೆಬ್ರವರಿ 1ರಿಂದ (Financial Changes From February 1) ಹಣಕಾಸಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಬದಲಾಗುತ್ತಿವೆ. ಅದರಲ್ಲೂ, ಜಿಎಸ್ ಟಿ ಏರಿಕೆ ಸೇರಿ ವಿವಿಧ ಬದಲಾವಣೆಗಳು ಸಾರ್ವಜನಿಕರ ಜೇಬಿಗೆ ಭಾರವಾಗಲಿವೆ. ಹಾಗಾದರೆ, 2026ರ ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮಗಳು ಬದಲಾಗುತ್ತವೆ? ಇದರಿಂದ ಜನರ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ? ಇಲ್ಲಿದೆ ಮಾಹಿತಿ.
ಜಿಎಸ್ ಟಿ ದರ ಏರಿಕೆ ಅನ್ವಯ
ಸಿನ್ ಗೂಡ್ಸ್ ಎಂದೇ ಕರೆಯಲಾಗುವ ತಂಬಾಕು ಉತ್ಪನ್ನಗಳು ಹಾಗೂ ಪಾನ್ ಮಸಾಲಾಗಳ ಬೆಲೆಯು ಫೆಬ್ರವರಿ 1ರಿಂದ ಏರಿಕೆಯಾಗಲಿದೆ. ಇದರಿಂದಾಗಿ, ಪಾನ್ ಮಸಾಲಾ, ಸಿಗರೇಟ್ ಸೇರಿ ಹಲವು ಉತ್ಪನ್ನಗಳ ಬೆಲೆಯು ಜಾಸ್ತಿಯಾಗಲಿದೆ. ಸಿನ್ ಗೂಡ್ಸ್ ಗಳಿಗೆ ಕೇಂದ್ರ ಸರ್ಕಾರವು ಶೇ.40ರಷ್ಟು ಜಿಎಸ್ ಟಿ ಹೇರಿದೆ. ಇದು ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ಇವುಗಳಿಗೆ ಸೆಸ್ ಕೂಡ ಅನ್ವಯವಾಗುವ ಕಾರಣ ಜನರ ಜೇಬಿಗೆ ಹೊರೆಯಾಗಲಿದೆ.
ಮ್ಯೂಚುವಲ್ ಫಂಡ್ ನಿಯಮ ಬದಲು
ವಿಶೇಷ ಸಂದರ್ಭಗಳಲ್ಲಿ ಭಾನುವಾರವೂ ಷೇರು ಮಾರುಕಟ್ಟೆ ಸಕ್ರಿಯವಾಗಿದ್ದರೆ, ಇದುವರೆಗೆ ಮ್ಯೂಚುವಲ್ ಫಂಡ್ ಗಳಲ್ಲೂ ಚಟುವಟಿಕೆ ಇರುತ್ತಿತ್ತು. ಆದರೆ, ಇನ್ನುಮುಂದೆ ಲಿಕ್ವಿಡ್ ಹಾಗೂ ಓವರ್ ನೈಟ್ ಫಂಡ್ ಗಳನ್ನು ಹೊರತುಪಡಿಸಿ, ಇಟಿಎಫ್ ಗಳು ಸಕ್ರಿಯವಾಗಿರುವುದಿಲ್ಲ. ಭಾನುವಾರ ಬ್ಯಾಂಕ್ ಗಳ ಚಟುವಟಿಕೆ ಇರದ ಕಾರಣ ಮ್ಯೂಚುವಲ್ ಫಂಡ್ ಗಳು ಕೂಡ ಏರಿಳಿತ ಕಾಣದೆ, ರಜಾ ದಿನವೆಂದೇ ಪರಿಗಣಿಸಲಾಗುತ್ತದೆ.
ಚೆಕ್ ನಿಯಮಗಳಲ್ಲಿ ಬದಲಾವಣೆ
ಬೃಹತ್ ಮೊತ್ತದ ಚೆಕ್‌ಗಳನ್ನು ಕ್ಲಿಯರ್ ಮಾಡಲು ಬ್ಯಾಂಕ್ ಗಳಿಗೆ ಕಠಿಣ ನಿಯಮಗಳು ಅನ್ವಯವಾಗಲಿವೆ. ಜನರು ಬೃಹತ್ ಮೊತ್ತದ ಚೆಕ್ ಗಳನ್ನು ಬ್ಯಾಂಕ್ ಗಳಿಗೆ ಸಲ್ಲಿಸುವ ಮೊದಲು ಮಾಹಿತಿ ನೀಡಬೇಕು. ಆಗ ಇದನ್ನು ಬ್ಯಾಂಕ್ ಗಳು ದೃಢೀಕರಣ ಮಾಡಿಕೊಳ್ಳುತ್ತವೆ. ಇಲ್ಲದಿದ್ದರೆ, ಚೆಕ್ ರಿಜೆಕ್ಟ್ ಆಗುವ ಸಾಧ್ಯತೆಗಳು ಹೆಚ್ಚು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ನಿಮ್ಮ ಬಿಪಿ ಬಗ್ಗೆ ಎಚ್ಚರಿಸುತ್ತೆ ಆ್ಯಪಲ್ ವಾಚ್ : ಭಾರತದ ನಂತರ ಈಗ 7 ಹೊಸ ದೇಶಗಳಿಗೂ ವಿಸ್ತರಣೆ



















