ದಾವಣಗೆರೆ: ಮದುವೆಯಾಗಿ ಎರಡುವರೆ ತಿಂಗಳಿಗೆ ನವ ವಿವಾಹಿತನೊಬ್ಬ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದಲ್ಲಿ ನಡೆದಿದೆ.
ಹರೀಶ್(32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮದುವೆಯಾಗಿ ಎರಡುವರೆ ತಿಂಗಳಲ್ಲಿ ಪತ್ನಿ ಸರಸ್ವತಿ ಪರ ಪುರುಷನೊಂದಿಗೆ ಓಡಿ ಹೋಗಿ, ನಂತರ ಈತನ ಮೇಲೆ ಇಲ್ಲ ಸಲ್ಲದ ಆರೋಪ ಮತ್ತು ಪ್ರಾಣ ಬೆದರಿಕೆ ಹಾಕಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಹರೀಶ್ ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಹೆಂಡತಿ, ಅತ್ತೆ ಮಾವ ಹಾಗೂ ಹೆಂಡತಿಯನ್ನ ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಡೆತ್ ನೋಟ್ ಬರೆದಿದ್ದಾನೆ, ಹಾಗೂ ತನ್ನ ಅಂತ್ಯ ಸಂಸ್ಕಾರವನ್ನು ಬಸವ ಧರ್ಮ ಪ್ರಕಾರವಾಗಿ ನೆರವೇರಿಸುವಂತೆ ಕೂಡ ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನಾ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೀಶ್ ಸಾವಿನಿಂದ ಮನನೊಂದು, ಮುಂದೆ ನಿಂತು ಮದುವೆ ಮಾಡಿಸಿದ್ದ ಮಹಿಳೆಯ ಸೋದರ ಮಾವ ರುದ್ರೇಶ್ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹುಚ್ಚುನಾಯಿ ಡೆಡ್ಲಿ ಅಟ್ಯಾಕ್ | 15ಕ್ಕೂ ಅಧಿಕ ಮಂದಿಗೆ ಗಾಯ



















