ಬೆಂಗಳೂರು : ರಾಮಮೂರ್ತಿ ನಗರದಲ್ಲಿ ನಡೆದ ಮಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ (ಟೆಕ್ಕಿ) ಶರ್ಮಿಳಾ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಆರಂಭದಲ್ಲಿ ಅಗ್ನಿ ಅವಘಡದಿಂದ ಉಸಿರುಗಟ್ಟಿ ಶರ್ಮಿಳಾ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದ್ದ ಈ ಪ್ರಕರಣ, ಈಗ ಅತ್ಯಾಚಾರ ಯತ್ನ ಮತ್ತು ಬರ್ಬರ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿದೆ.
ನೆರೆಮನೆಯವನೇ ಆದ ಆರೋಪಿ ಕರ್ನಲ್ (18), ಶರ್ಮಿಳಾ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನುವ ಶಂಕೆ ಈ ಮೊದಲೇ ವ್ಯಕ್ತವಾಗಿತ್ತು. ಆದ್ರೆ ಮೊದಲಿಗೆ ದೌರ್ಜನ್ಯದ ಆರೋಪವನ್ನು ಕರ್ನಲ್ ತಳ್ಳಿಹಾಕಿದ್ದ. ಆದರೀಗ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿರುವುದಾಗಿ ಪೊಲೀಸ್ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿ ಕರ್ನಲ್ ಕುರೈ ಮೃತ ಶರ್ಮಿಳಾ ವಾಸವಿದ್ದ ಮನೆಯ ಪಕ್ಕದ ಮನೆಯಲ್ಲೇ ವಾಸವಾಗಿದ್ದ. ಕೇವಲ 18 ವರ್ಷದ ಈ ಯುವಕನಿಗೆ ಶರ್ಮಿಳಾ ಮೇಲೆ ಪ್ರೀತಿ ಇರಲಿಲ್ಲ, ಬದಲಿಗೆ ವಿಕೃತ ಕಾಮವಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸುಮಾರು ಒಂದೂವರೆ ತಿಂಗಳಿನಿಂದ ಪ್ರತಿನಿತ್ಯ ಟೆರಸ್ ಮೇಲೆ ನಿಂತು ಶರ್ಮಿಳಾ ಅವರ ಚಲನವಲನಗಳನ್ನು ಗಮನಿಸುತ್ತಿದ್ದ ಈತ, ಆಕೆ ಕೆಲಸಕ್ಕೆ ಹೋಗುವಾಗ ಮತ್ತು ಬರುವಾಗ ಸದ್ದಿಲ್ಲದೆ ಹಿಂಬಾಲಿಸುತ್ತಿದ್ದ.
ಹತ್ಯೆ ನಡೆದದ್ದು ಹೇಗೆ?
ಜನವರಿ 3ರಂದು ಶರ್ಮಿಳಾ ಮನೆಯಲ್ಲಿ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ಆರೋಪಿ, ಸ್ಲೈಡ್ ಡೋರ್ ಮೂಲಕ ಮನೆ ಒಳಗೆ ನುಗ್ಗಿದ್ದನು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದಾಗ ಶರ್ಮಿಳಾ ತೀವ್ರ ಪ್ರತಿರೋಧ ಒಡ್ಡಿದ್ದಾರೆ. ಇದರಿಂದ ಗಾಬರಿಗೊಂಡ ಆರೋಪಿ, ಆಕೆ ಕೂಗಾಡದಂತೆ ಬಾಯಿ ಒತ್ತಿ ಹಿಡಿದು ಕತ್ತು ಹಿಸುಕಿದ್ದಾನೆ. ‘ನನ್ನನ್ನು ಬಿಟ್ಟುಬಿಡು’ ಎಂದು ಶರ್ಮಿಳಾ ಕೈಹಿಡಿದು ಬೇಡಿಕೊಂಡರೂ ಕಿಂಚಿತ್ತೂ ದಯೆ ತೋರದ ಕಿರಾತಕ, ಪ್ರಾಣ ಹೋಗುವವರೆಗೂ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.
ಸಾಕ್ಷ್ಯ ನಾಶಕ್ಕೆ ಬೆಂಕಿ ಹಚ್ಚಿದ ಕಿರಾತಕ
ಶರ್ಮಿಳಾ ಉಸಿರು ನಿಂತ ಮೇಲೆ, ಇದು ಕೊಲೆ ಎಂದು ಯಾರಿಗೂ ತಿಳಿಯಬಾರದೆಂದು ಆರೋಪಿ ವಿಕೃತ ಸಂಚು ರೂಪಿಸಿದ್ದ. ಹಾಸಿಗೆಯ ಮೇಲೆ ಟಿಶ್ಯು ಪೇಪರ್ ಮತ್ತು ಬಟ್ಟೆಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿ, ಅಗ್ನಿ ಅವಘಡದಂತೆ ಬಿಂಬಿಸಲು ಪ್ರಯತ್ನಿಸಿ ಅದೇ ಸ್ಲೈಡ್ ಡೋರ್ ಮೂಲಕ ಪರಾರಿಯಾಗಿದ್ದ. ಶರ್ಮಿಳಾ ಅವರ ಮೊಬೈಲ್ ಫೋನ್ ಅನ್ನೂ ಕಳ್ಳತನ ಮಾಡಿದ್ದ ಈತ, ನಂತರ ಅದರಲ್ಲಿ ತನ್ನ ಸಿಮ್ ಕಾರ್ಡ್ ಹಾಕಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಶರ್ಮಿಳಾ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ, ಅತ್ಯಾ*ಚಾರ ನಡೆದಿದೆಯೇ ಎಂಬ ಬಗ್ಗೆ ಸ್ಪಷ್ಟನೆ ಪಡೆಯಲು ಪೊಲೀಸರು ಕೆಲವು ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್ (FSL) ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ : ಕುಡಿದ ನಶೆಯಲ್ಲಿ ಅಡ್ಡಾದಿಡ್ಡಿ ಕಾರ್ ಡ್ರೈವಿಂಗ್ | ಮರಕ್ಕೆ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವು



















