ಢಾಕಾ: 2026ರ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಆಘಾತಕಾರಿ ನಿರ್ಧಾರದ ಹಿಂದೆ ಆಟಗಾರರ ಯಾವುದೇ ಸಹಮತವಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಭದ್ರತಾ ಕಾರಣಗಳನ್ನು ನೀಡಿ ಭಾರತದಲ್ಲಿ ನಡೆಯಲಿರುವ ಐಸಿಸಿ ಮೆಗಾ ಟೂರ್ನಿಯನ್ನು ಬಹಿಷ್ಕರಿಸಲು ಬಾಂಗ್ಲಾದೇಶ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿ ನಿರ್ಧರಿಸಿದ್ದು, ಈ ಪ್ರಕ್ರಿಯೆಯಲ್ಲಿ ದೇಶದ ಪ್ರಮುಖ ಕ್ರಿಕೆಟಿಗರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ವರದಿಗಳು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಇತ್ತೀಚಿನ ವರದಿಗಳ ಪ್ರಕಾರ, ಜನವರಿ 22 ರಂದು ನಡೆದ ಸಭೆಯು ಕೇವಲ ಔಪಚಾರಿಕವಾಗಿತ್ತು. ಅಲ್ಲಿ ಆಟಗಾರರ ಅಭಿಪ್ರಾಯವನ್ನು ಕೇಳುವ ಬದಲು, ಸರ್ಕಾರ ಈಗಾಗಲೇ ಕೈಗೊಂಡಿದ್ದ ನಿರ್ಧಾರವನ್ನು ಅವರಿಗೆ ತಿಳಿಸುವುದಷ್ಟೇ ಮಂಡಳಿಯ ಉದ್ದೇಶವಾಗಿತ್ತು ಎನ್ನಲಾಗಿದೆ. ಹೆಸರು ಹೇಳಲು ಇಚ್ಛಿಸದ ಬಾಂಗ್ಲಾದೇಶದ ಹಿರಿಯ ಆಟಗಾರರೊಬ್ಬರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, “ಸಭೆಯಲ್ಲಿ ನಮ್ಮ ಒಪ್ಪಿಗೆಯನ್ನು ಯಾರೂ ಕೇಳಲಿಲ್ಲ. ಬದಲಿಗೆ, ಸರ್ಕಾರ ಮತ್ತು ಮಂಡಳಿ ಈಗಾಗಲೇ ನಿರ್ಧರಿಸಿದ್ದ ವಿಷಯವನ್ನು ನಮಗೆ ತಿಳಿಸಲಾಯಿತು. ಈ ಹಿಂದೆ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಮ್ಮೊಂದಿಗೆ ಚರ್ಚಿಸಲಾಗುತ್ತಿತ್ತು, ಆದರೆ ಈ ಬಾರಿ ಸರ್ಕಾರದ ಆದೇಶವೇ ಅಂತಿಮವಾಗಿತ್ತು,” ಎಂದು ನೋವು ತೋಡಿಕೊಂಡಿದ್ದಾರೆ.
ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ಆಡಲು ಆಟಗಾರರು ತುದಿಗಾಲಲ್ಲಿ ನಿಂತಿದ್ದರೂ, ಮಂಡಳಿಯು ಭದ್ರತೆಯ ಕುರಿತಾದ ಆತಂಕಗಳನ್ನು ಮುಂದಿಟ್ಟು ಆಟಗಾರರ ಆಸೆಗೆ ತಣ್ಣೀರೆರಚಿದೆ. ಸಭೆಯ ವೇಳೆ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಲಿಟನ್ ದಾಸ್ ಅವರು ಟೂರ್ನಿಯಲ್ಲಿ ಆಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ಅಧಿಕಾರಿಗಳು ಹಿಂದೆ ಬಾಂಗ್ಲಾ ಆಟಗಾರರ ಮೇಲೆ ನಡೆದಿದೆ ಎನ್ನಲಾದ ಬೆದರಿಕೆ ಘಟನೆಗಳು ಮತ್ತು ಪ್ರೇಕ್ಷಕರು ಹಾಗೂ ಪತ್ರಕರ್ತರ ಸುರಕ್ಷತೆಯ ನೆಪವೊಡ್ಡಿ ಆಟಗಾರರ ವಾದವನ್ನು ತಳ್ಳಿಹಾಕಿದ್ದಾರೆ. “ನಾವು ವಿಶ್ವಕಪ್ ಆಡದಿದ್ದರೆ ಅದು ನಮ್ಮ ಕ್ರಿಕೆಟ್‌ಗೆ ಆಗುವ ದೊಡ್ಡ ನಷ್ಟ. ಬಾಂಗ್ಲಾ ಕ್ರಿಕೆಟ್ ಇವತ್ತಿಗೆ ಅಂತ್ಯವಾಯಿತು,” ಎಂದು ಮತ್ತೊಬ್ಬ ಆಟಗಾರ ಹತಾಶೆ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದೇಶವು ಐಸಿಸಿಯ ವಿವಾದ ಪರಿಹಾರ ಸಮಿತಿಯ ಮೊರೆ ಹೋಗಲು ಕೊನೆಯ ಪ್ರಯತ್ನ ನಡೆಸಿದೆಯಾದರೂ, ಸದ್ಯದ ಪರಿಸ್ಥಿತಿಯಲ್ಲಿ ಬಾಂಗ್ಲಾ ತಂಡ ವಿಶ್ವಕಪ್‌ನಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಬಾಂಗ್ಲಾದೇಶದ ಈ ಸ್ಥಾನವನ್ನು ಸ್ಕಾಟ್ಲೆಂಡ್ ತಂಡವು ತುಂಬಲಿದ್ದು, ವಿಶ್ವಕಪ್‌ನಲ್ಲಿ ಬಾಂಗ್ಲಾ ಬದಲಿಗೆ ಸ್ಕಾಟ್ಲೆಂಡ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರದ ರಾಜಕೀಯ ಹಸ್ತಕ್ಷೇಪ ಮತ್ತು ಆಟಗಾರರ ಹಿತಾಸಕ್ತಿ ಕಡೆಗಣನೆಯು ಬಾಂಗ್ಲಾದೇಶದ ಕ್ರಿಕೆಟ್ ಭವಿಷ್ಯವನ್ನು ಅಂಧಕಾರಕ್ಕೆ ದೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಲಯಕ್ಕೆ ಮರಳಿದ ‘ಮಿಸ್ಟರ್ 360’ ಮತ್ತು ಸೂರ್ಯ ಬ್ಯಾಟಿಂಗ್ ರಹಸ್ಯಸ ವಿವರಿಸಿದ ಗವಾಸ್ಕರ್



















