ನವದೆಹಲಿ/ಫರಿದಾಬಾದ್: ಹೋಂವರ್ಕ್ ಮಾಡಲು ವಿಫಲವಾದ ಕಾರಣಕ್ಕೆ ತಂದೆಯೊಬ್ಬ ತನ್ನ ನಾಲ್ಕು ವರ್ಷದ ಹೆಣ್ಣು ಮಗಳನ್ನೇ ಬರ್ಬರವಾಗಿ ಹೊಡೆದು ಸಾಯಿಸಿರುವ ಘೋರ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜನವರಿ 21 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆಯ ವಿವರ:
ಆರೋಪಿಯನ್ನು ಉತ್ತರ ಪ್ರದೇಶದ ಸೋನಭದ್ರ ಮೂಲದ ಕೃಷ್ಣ ಜೈಸ್ವಾಲ್ (31) ಎಂದು ಗುರುತಿಸಲಾಗಿದೆ. ಆತ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಫರಿದಾಬಾದ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ದಂಪತಿಗಳಿಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಹಗಲು ಪಾಳಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಕಾರಣ, ಜೈಸ್ವಾಲ್ ಮನೆಯಲ್ಲೇ ಇದ್ದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದನು.
ಜನವರಿ 21 ರಂದು ಮಗಳಿಗೆ ಪಾಠ ಹೇಳಿಕೊಡುವಾಗ, 1 ರಿಂದ 50 ರವರೆಗೆ ಅಂಕಿಗಳನ್ನು ಬರೆಯುವಂತೆ ಜೈಸ್ವಾಲ್ ಸೂಚಿಸಿದ್ದಾನೆ. ಆದರೆ, ಮಗು ಇದನ್ನು ಬರೆಯಲು ವಿಫಲವಾದಾಗ ಸಿಟ್ಟಿಗೆದ್ದ ಆತ, ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ತಂದೆಯ ಏಟಿನೇಟಿಗೆ ತೀವ್ರವಾಗಿ ಗಾಯಗೊಂಡ ಬಾಲಕಿ ಮನೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.
ತಾಯಿಯಿಂದಲೇ ದೂರು:
ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ತಾಯಿ, ಮಗಳು ಮೃತಪಟ್ಟಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಅವರು ಸೆಕ್ಟರ್ 58ರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಕೃಷ್ಣ ಜೈಸ್ವಾಲ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಒಂದು ದಿನದ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಕೌಟುಂಬಿಕ ಕಲಹಕ್ಕೆ 4 ಬಲಿ | ಪತ್ನಿ, ಸಂಬಂಧಿಕರನ್ನು ಗುಂಡಿಕ್ಕಿ ಕೊಂದ ಭಾರತೀಯ



















