ರಾಯ್ಪುರ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ, ಇಶಾನ್ ಕಿಶನ್ ಅವರ ದಾಖಲೆಯ ಅರ್ಧಶತಕದ ಬಲದಿಂದ 209 ರನ್‌ಗಳ ಗುರಿಯನ್ನು ಇನ್ನೂ 28 ಎಸೆತಗಳು ಬಾಕಿ ಇರುವಂತೆಯೇ ತಲುಪಿ ವಿಜಯದ ನಗೆ ಬೀರಿತು. ಇದು ಟಿ20 ಇತಿಹಾಸದಲ್ಲಿ 200ಕ್ಕೂ ಅಧಿಕ ರನ್ ಗುರಿಯನ್ನು ಅತಿವೇಗವಾಗಿ ಚೇಸ್ ಮಾಡಿದ ವಿಶ್ವದಾಖಲೆಯಾಗಿದೆ.
ಇಶಾನ್ ಕಿಶನ್ ನೂತನ ದಾಖಲೆ
ಆರಂಭಿಕ ಆಟಗಾರ ಇಶಾನ್ ಕಿಶನ್ ನ್ಯೂಜಿಲೆಂಡ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ, ಕಿವೀಸ್ ವಿರುದ್ಧ ಟಿ20 ಪಂದ್ಯದಲ್ಲಿ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಕಳೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ (22 ಎಸೆತ) ನಿರ್ಮಿದ್ದ ದಾಖಲೆಯನ್ನು ಇಶಾನ್ ಮುರಿದರು.
ಇನ್ನಿಂಗ್ಸ್‌ನ ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮ್ಯಾಟ್ ಹೆನ್ರಿ ಬೌಲಿಂಗ್‌ಗೆ ಬೌಂಡರಿ ಬಾರಿಸುವ ಮೂಲಕ ಇಶಾನ್ ಈ ಮೈಲಿಗಲ್ಲು ತಲುಪಿದರು. ಅಂತಿಮವಾಗಿ 32 ಎಸೆತಗಳನ್ನು ಎದುರಿಸಿದ ಅವರು 11 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 76 ರನ್ ಸಿಡಿಸಿದರು.
ಪವರ್-ಪ್ಲೇ ಮತ್ತು ಅಭಿಷೇಕ್ ವೈಫಲ್ಯ
ಪವರ್-ಪ್ಲೇಯಲ್ಲೇ ಅಬ್ಬರಿಸಿದ ಇಶಾನ್ 56 ರನ್ ಕಲೆಹಾಕಿದರು. ಈ ಮೂಲಕ ಮೊದಲ ಆರು ಓವರ್‌ಗಳಲ್ಲಿ ವೈಯಕ್ತಿಕವಾಗಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ (58 ರನ್) ನಂತರದ ಸ್ಥಾನ ಪಡೆದರು.
ಆದರೆ, ಮೊದಲ ಪಂದ್ಯದ ಹೀರೋ ಅಭಿಷೇಕ್ ಶರ್ಮಾ (0) ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಜಾಕೋಬ್ ಡಫಿ ಎಸೆದ ಇನ್ನಿಂಗ್ಸ್‌ನ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಲು ಹೋಗಿ ಡೆವೊನ್ ಕಾನ್ವೇಗೆ ಕ್ಯಾಚಿತ್ತು ಶೂನ್ಯಕ್ಕೆ ನಿರ್ಗಮಿಸಿದರು.
ಲಯ ಕಂಡುಕೊಂಡ ಸೂರ್ಯಕುಮಾರ್
ನಾಯಕ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ತಮ್ಮ ನೈಜ ಆಟ ಪ್ರದರ್ಶಿಸಿದರು. ಸ್ಪೋಟಕ ಇನಿಂಗ್ಸ್ ಕಟ್ಟಿದ ಅವರು 37 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ ಅಜೇಯ 82 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ನಾಲ್ಕನೇ ವಿಕೆಟ್‌ಗೆ ಶಿವಂ ದುಬೆ (ಅಜೇಯ 36, 18 ಎಸೆತ) ಅವರೊಂದಿಗೆ 81 ರನ್‌ಗಳ ಜೊತೆಯಾಟವಾಡಿ ಪಂದ್ಯವನ್ನು ಸುಲಭವಾಗಿ ಗೆಲ್ಲಿಸಿಕೊಟ್ಟರು.
ಇದನ್ನೂ ಓದಿ: ಟೀಮ್ ಇಂಡಿಯಾ ಆಯ್ಕೆಗಾರರಿಗೆ ‘ಬ್ಯಾಟ್’ ಮೂಲಕವೇ ಉತ್ತರ : ರಣಜಿಯಲ್ಲಿ ಸರ್ಫರಾಜ್ ಖಾನ್ 17ನೇ ಶತಕದ ಸಂಭ್ರಮ!



















