ಲಕ್ನೋ: ಕಲಿಯಲು ವಯಸ್ಸಿನ ಮಿತಿಯಿಲ್ಲ ಮತ್ತು ಹೊಸತನ್ನು ಪ್ರಯತ್ನಿಸಲು ಸಮಯದ ಮಿತಿಯಿಲ್ಲ ಎಂಬುದಕ್ಕೆ ಉತ್ತರ ಪ್ರದೇಶದ 70 ವರ್ಷದ ಈ ಹಿರಿಯ ನಾಗರಿಕರೇ ಅತ್ಯುತ್ತಮ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ. ವಿನೋದ್ ಕುಮಾರ್ ಎಂಬ ಈ ವೃದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ತಮ್ಮ ಮೊದಲ ‘ವ್ಲಾಗ್’ (Vlog) ಕೇವಲ 48 ಗಂಟೆಗಳಲ್ಲಿ 22 ಮಿಲಿಯನ್ ಅಂದರೆ 2.2 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಮೂಲಕ ಇಂಟರ್ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.
ಮುಗ್ಧತೆಯೇ ಈ ಯಶಸ್ಸಿನ ಗುಟ್ಟು
ಸಾಮಾನ್ಯವಾಗಿ ವಯಸ್ಸಾದ ಮೇಲೆ ವಿಶ್ರಾಂತಿ ಪಡೆಯುವವರೇ ಹೆಚ್ಚು. ಆದರೆ ವಿನೋದ್ ಕುಮಾರ್ ಅವರು ತಮ್ಮ ಸಮಯವನ್ನು ಸಾರ್ಥಕವಾಗಿ ಕಳೆಯಲು ಕೈಯಲ್ಲಿ ಮೊಬೈಲ್ ಹಿಡಿದು ವೀಡಿಯೊ ಮಾಡಲು ಮುಂದಾಗಿದ್ದಾರೆ. “ನನಗೆ ವ್ಲಾಗ್ ಮಾಡಲು ಬರುವುದಿಲ್ಲ, ಆದರೂ ಪ್ರಯತ್ನಿಸುತ್ತಿದ್ದೇನೆ” ಎಂಬ ಅವರ ಮುಗ್ಧ ಮಾತುಗಳು ನೆಟ್ಟಿಗರ ಮನ ಗೆದ್ದಿವೆ. “70ನೇ ವಯಸ್ಸಿನಲ್ಲಿ ನಾನು ನನ್ನ ಮೊದಲ ವ್ಲಾಗ್ ಮಾಡುತ್ತಿದ್ದೇನೆ” ಎಂದು ಅವರು ನಾಚಿಕೆಯಿಂದಲೇ ಹೇಳುವ ಆರಂಭದ ದೃಶ್ಯವು ವೀಕ್ಷಕರಿಗೆ ತಮ್ಮದೇ ಮನೆಯ ಪೋಷಕರು ಅಥವಾ ಅಜ್ಜಂದಿರನ್ನು ನೆನಪಿಸುವಂತೆ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದುಬಂದ ಮೆಚ್ಚುಗೆ
ಜನವರಿ 20ರಂದು ಹಂಚಿಕೊಳ್ಳಲಾದ ಈ ವೀಡಿಯೊಗೆ ಈವರೆಗೆ 16 ಲಕ್ಷ ಲೈಕ್ಸ್‌ಗಳು ಬಂದಿವೆ. ವಿನೋದ್ ಕುಮಾರ್ ಅವರ ಈ ಸಾಹಸಕ್ಕೆ ಇನ್‌ಸ್ಟಾಗ್ರಾಮ್ ಬಳಕೆದಾರರು ಮನಸಾರೆ ಶುಭ ಹಾರೈಸಿದ್ದಾರೆ. “ವಯಸ್ಸು ಕೇವಲ ಒಂದು ಸಂಖ್ಯೆ ಅಂಕಲ್, ಮುಂದುವರಿಯಿರಿ ನಾವು ನಿಮ್ಮ ಜೊತೆಗಿದ್ದೇವೆ” ಎಂದು ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ. “ನಮ್ಮ ಪೋಷಕರು ಕೂಡ ನಿಮ್ಮಂತೆಯೇ ಇದ್ದಾರೆ, ನಿಮ್ಮ ವೀಡಿಯೊ ನೋಡಿ ಮನಸ್ಸಿಗೆ ತುಂಬಾ ಖುಷಿಯಾಯಿತು” ಎಂದು ಅನೇಕರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಕಲಿಯುವ ಹಂಬಲಕ್ಕೆ ಸಾಟಿಯಿಲ್ಲ
ಯಾವುದೇ ಅಬ್ಬರವಿಲ್ಲದ, ಅತ್ಯಂತ ಸರಳ ಮತ್ತು ಪ್ರಾಮಾಣಿಕವಾದ ಇವರ ವೀಡಿಯೊ ಇಂದು ಡಿಜಿಟಲ್ ಲೋಕದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ತಾಂತ್ರಿಕ ಜ್ಞಾನವಿಲ್ಲದಿದ್ದರೂ ಏನಾದರೂ ಹೊಸತನ್ನು ಕಲಿಯಬೇಕು ಎಂಬ ಅವರ ಹಂಬಲವು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ‘ಇನ್‌ಸ್ಟಾ ಅಂಕಲ್’ (@instauncle_9) ಎಂದೇ ಪ್ರಸಿದ್ಧಿಯಾಗಿರುವ ವಿನೋದ್ ಕುಮಾರ್, ಕೇವಲ ಎರಡು ದಿನಗಳಲ್ಲಿ ಗಳಿಸಿದ ಈ ಜನಪ್ರಿಯತೆ ಸಾಮಾಜಿಕ ಜಾಲತಾಣದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇದನ್ನೂ ಓದಿ; ಸೆಲ್ಫಿಗಾಗಿ ಅಲ್ಲ, ಮಗಳ ಪ್ರಾಣ ಉಳಿಸಲು ರೋಹಿತ್ ಶರ್ಮಾ ಕೈ ಹಿಡಿದ ತಾಯಿ



















