ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷ ಈಗ ತಾರಕಕ್ಕೇರಿದ್ದು, ಉಭಯ ದೇಶಗಳ ನಾಯಕರ ನಡುವೆ ನೇರ ಬೆದರಿಕೆ ಹಾಗೂ ಪ್ರತಿಬೆದರಿಕೆಗಳ ಸರಣಿ ಆರಂಭವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಇರಾನ್‌ಗೆ ಕಠಿಣ ಸಂದೇಶ ರವಾನಿಸಿದ್ದು, ಒಂದು ವೇಳೆ ಇರಾನ್ ತನ್ನ ಹತ್ಯೆಗೆ ಸಂಚು ರೂಪಿಸಿ ಯಶಸ್ವಿಯಾದರೆ, ಆ ದೇಶವನ್ನು “ಭೂಮಿಯಿಂದಲೇ ಅಳಿಸಿ ಹಾಕಲಾಗುವುದು” ಎಂದು ಗುಡುಗಿದ್ದಾರೆ.
ಇರಾನ್ ಇತಿಹಾಸ ಸೇರಲಿದೆ : ಟ್ರಂಪ್ ಕಿಡಿ
ನ್ಯೂಸ್ ನೇಷನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ 79 ವರ್ಷದ ಟ್ರಂಪ್, “ನನ್ನ ರಕ್ಷಣಾ ಪಡೆಗಳಿಗೆ ನಾನು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇನೆ. ಒಂದು ವೇಳೆ ನನಗೆ ಏನಾದರೂ ಸಂಭವಿಸಿದರೆ, ಇರಾನ್ ಎಂಬ ದೇಶವನ್ನೇ ಈ ಭೂಮಿಯ ಮೇಲಿಂದ ಇಲ್ಲದಂತೆ ಮಾಡಲಾಗುವುದು,” ಎಂದು ಹೇಳಿದ್ದಾರೆ. ಇರಾನ್‌ನ ನಾಯಕತ್ವ ಬದಲಾಗಬೇಕಾದ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಇರಾನ್ ಆಡಳಿತವು ತನ್ನ ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವಕ್ಕೇ ಬೆಂಕಿ ಹಚ್ಚುತ್ತೇವೆ: ಇರಾನ್ ತಿರುಗೇಟು
ಟ್ರಂಪ್ ಅವರ ಈ ಹೇಳಿಕೆಗೆ ಇರಾನ್ ಕೂಡ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೆ ಯಾವುದೇ ಅಪಾಯ ಎದುರಾದರೆ ಸುಮ್ಮನಿರುವುದಿಲ್ಲ ಎಂದು ಇರಾನ್ ಜನರಲ್ ಅಬೊಲ್ಫಾಜ್ಲ್ ಶೆಕರ್ಚಿ ಎಚ್ಚರಿಸಿದ್ದಾರೆ. “ನಮ್ಮ ನಾಯಕನ ವಿರುದ್ಧ ಅತಿಕ್ರಮಣದ ಕೈ ಚಾಚಿದರೆ, ನಾವು ಆ ಕೈಯನ್ನು ಕತ್ತರಿಸುವುದು ಮಾತ್ರವಲ್ಲ, ಇಡೀ ವಿಶ್ವಕ್ಕೇ ಬೆಂಕಿ ಹಚ್ಚುತ್ತೇವೆ. ಈ ವಲಯದಲ್ಲಿ ಅಮೆರಿಕಕ್ಕೆ ಅಡಗಿಕೊಳ್ಳಲು ಯಾವುದೇ ಸುರಕ್ಷಿತ ತಾಣವನ್ನು ಬಿಡುವುದಿಲ್ಲ,” ಎಂದು ಅವರು ಗುಡುಗಿದ್ದಾರೆ.
ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ
ಇತ್ತ ಇರಾನ್ ದೇಶದ ಒಳಗೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಅತಿದೊಡ್ಡ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಇರಾನ್‌ನಲ್ಲಿ ನಡೆಯುತ್ತಿವೆ. ಆರ್ಥಿಕ ಮುಗ್ಗಟ್ಟು ಮತ್ತು ಕಠಿಣ ಆಡಳಿತದ ವಿರುದ್ಧ ಜನರು ಬೀದಿಗಿಳಿದಿದ್ದಾರೆ. ಮಾನವ ಹಕ್ಕುಗಳ ಸಂಘಟನೆಗಳ ವರದಿಗಳ ಪ್ರಕಾರ, ಈ ಪ್ರತಿಭಟನೆಗಳ ಹತ್ತಿಕ್ಕುವಿಕೆಯಲ್ಲಿ ಇದುವರೆಗೆ ಸುಮಾರು 4,000 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ, ನಾರ್ವೆ ಮೂಲದ ಸಂಘಟನೆಗಳು ಈ ಸಾವಿನ ಸಂಖ್ಯೆ 20,000 ದಾಟಿರಬಹುದು ಎಂಬ ಆತಂಕ ವ್ಯಕ್ತಪಡಿಸಿವೆ.
ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ಆಗ್ರಹ
ಇರಾನ್‌ನ ಈ ರಕ್ತಪಾತವನ್ನು ತಡೆಯಲು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಶಿರಿನ್ ಎಬಾಡಿ ಅವರು ಅಮೆರಿಕದ ಹಸ್ತಕ್ಷೇಪವನ್ನು ಕೋರಿದ್ದಾರೆ. ಇರಾನ್‌ನ ಪರಮೋಚ್ಚ ನಾಯಕ ಮತ್ತು ಕ್ರಾಂತಿಕಾರಿ ಗಾರ್ಡ್‌ಗಳ (IRGC) ವಿರುದ್ಧ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಲ್ಲಿನ ಜನಸಾಮಾನ್ಯರ ಹತ್ಯಾಕಾಂಡವನ್ನು ತಡೆಯಬೇಕು ಎಂದು ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಸದ್ಯ ಇರಾನ್‌ನಲ್ಲಿ ಅಂತರ್ಜಾಲ ಸಂಪರ್ಕ ಕಡಿತಗೊಳಿಸಿರುವುದು ಅಲ್ಲಿನ ನೈಜ ಪರಿಸ್ಥಿತಿಯನ್ನು ಅರಿಯಲು ಅಡ್ಡಿಯಾಗಿದೆ.
ಇದನ್ನೂ ಓದಿ : ಸಚಿವ ಜಮೀರ್ ಆಪ್ತನ ಮನೆ ಮೇಲೆ ‘ಲೋಕಾ’ ದಾಳಿ ಕೇಸ್ | ಬಯಲಾಯ್ತು ಸರ್ಫರಾಜ್ ಖಾನ್ ಕೋಟಿ ಕೋಟಿ ಮೌಲ್ಯದ ಸಾಮ್ರಾಜ್ಯ!



















