ಬೆಂಗಳೂರು : ಸೇವಾನಿರತ ಶಿಕ್ಷಕರಿಗೆ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಕಡ್ಡಾಯ ಮಾಡಿದ ಸುಪ್ರೀಂ ಕೋರ್ಟ್ ಆದೇಶ ಪಾಲನೆಯಿಂದ ಪಾರಾಗಲು ಸೂಕ್ತ ಕಾನೂನು ತಿದ್ದುಪಡಿ ತಂದು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಇಂದು (ಜನವರಿ 8) ರಾಜ್ಯಾದ್ಯಂತ ಶಿಕ್ಷಕರು ತರಗತಿಯಲ್ಲಿ ಕಪ್ಪುಪಟ್ಟಿ ಧರಿಸಿ ಪಾಠ ಮಾಡಿದ್ದಾರೆ.
ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನೇತೃತ್ವದಲ್ಲಿ ರಚನೆಯಾಗಿರುವ ಅಖಿಲ ಭಾರತ ಶಿಕ್ಷಕರ ಸಂಘಟನೆಯ ಜಂಟಿ ಕ್ರಿಯಾ ಸಮಿತಿ ದೇಶಾದ್ಯಂತ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಪಾಠ ಮಾಡಲು ತೀರ್ಮಾನಿಸಿದೆ. ಅದರಂತೆ ರಾಜ್ಯದಲ್ಲಿಯೂ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಪಾಠ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಸೇವಾನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ನಿಯಮ ಸಡಿಲಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪುನರ್ ಪರಿಶೀಲನೆ ಸಲ್ಲಿಸಿ ಕಾನೂನು ಹೋರಾಟ ಒಂದು ಕಡೆ, ಮತ್ತೊಂದು ಕಡೆ ಸರ್ಕಾರ ಹಾಲಿ ಶಿಕ್ಷಕರಿಗೆ ನ್ಯಾಯ ಒದಗಿಸಲು ಸೂಕ್ತ ಕಾನೂನು ತಿದ್ದುಪಡಿ ತರಬೇಕಿದೆ. ಇದರೊಂದಿಗೆ ಹಳೆಯ ಪಿಂಚಣಿ ಜಾರಿಗೊಳಿಸಬೇಕು. ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕ ಕೈ ಬಿಟ್ಟು ಕಾಯಂ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ದೇಶಾದ್ಯಂತ ಎಲ್ಲ ಶಿಕ್ಷಕರಿಗೆ ಏಕರೂಪದ ವೇತನ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಪುತ್ರನ ಅಗಲಿಕೆ ಬೆನ್ನಲ್ಲೇ ಶೇ.75ರಷ್ಟು ಆಸ್ತಿ ದಾನ ಮಾಡುವ ಶಪಥಗೈದ ಉದ್ಯಮಿ ಅನಿಲ್ ಅಗರ್ವಾಲ್



















