ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಅವರು ತಮ್ಮ ದೀರ್ಘಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ರಾಜಸ್ಥಾನದ ರಣಥಂಬೋರ್‌ನಲ್ಲಿ ಕೇವಲ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿದ್ದು, ಸಮಾರಂಭದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಜೋಡಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಸಮಾರಂಭದಲ್ಲಿ ರೈಹಾನ್ ಕಡು ಬಣ್ಣದ ಶೇರ್ವಾನಿ ಧರಿಸಿದ್ದರೆ, ಅವಿವಾ ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಇದರ ಜೊತೆಗೆ, ದಂಪತಿ ತಮ್ಮ ಬಾಲ್ಯದ ಫೋಟೋವೊಂದನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ಪುಟ್ಟ ಬಾಲಕನಾಗಿದ್ದ ರೈಹಾನ್ ಕುರ್ತಾ-ಪೈಜಾಮ ಮತ್ತು ಅವಿವಾ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, 25 ವರ್ಷದ ರೈಹಾನ್ ಕಳೆದ ವಾರ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಅವಿವಾ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರು ಮತ್ತು ಅವಿವಾ ಅದನ್ನು ಒಪ್ಪಿಕೊಂಡರು. ಈ ಜೋಡಿ ಕಳೆದ ಏಳು ವರ್ಷಗಳಿಂದ ಪ್ರೀತಿಯಲ್ಲಿದ್ದರು ಎಂದು ತಿಳಿದುಬಂದಿದೆ. ಕೆಲವೇ ತಿಂಗಳಲ್ಲಿ ಮದುವೆ ನಡೆಯುವ ನಿರೀಕ್ಷೆಯಿದೆ.
ಯಾರು ಈ ಅವಿವಾ ಬೇಗ್?
ಅವಿವಾ ಬೇಗ್ ದೆಹಲಿ ಮೂಲದ ಕುಟುಂಬದವರು. ಇವರ ತಂದೆ ಇಮ್ರಾನ್ ಬೇಗ್ ಉದ್ಯಮಿಯಾಗಿದ್ದು, ತಾಯಿ ನಂದಿತಾ ಬೇಗ್ ಒಳಾಂಗಣ ವಿನ್ಯಾಸಗಾರ್ತಿ ಆಗಿದ್ದಾರೆ. ವಿಶೇಷವೆಂದರೆ, ನಂದಿತಾ ಅವರು ಪ್ರಿಯಾಂಕಾ ಗಾಂಧಿ ಅವರೊಂದಿಗೆ ದೀರ್ಘಕಾಲದ ಸ್ನೇಹ ಹೊಂದಿದ್ದು, ಕಾಂಗ್ರೆಸ್ ಪ್ರಧಾನ ಕಚೇರಿಯ ಇಂಟೀರಿಯರ್ ವಿನ್ಯಾಸದಲ್ಲಿಯೂ ಕೆಲಸ ಮಾಡಿದ್ದಾರೆ.
ಅವಿವಾ ದೆಹಲಿಯ ಮಾಡರ್ನ್ ಸ್ಕೂಲ್‌ನಲ್ಲಿ ಓದಿದ್ದು, ನಂತರ ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಮಾಧ್ಯಮ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಅವರು ಇಂಟೀರಿಯರ್ ಡಿಸೈನರ್, ಫೋಟೋಗ್ರಾಫರ್ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಇನ್ನು, ರೈಹಾನ್ ವಾದ್ರಾ ಅವರು ಡೆಹ್ರಾಡೂನ್‌ನ ಪ್ರಸಿದ್ಧ ಡೂನ್ ಸ್ಕೂಲ್‌ನಲ್ಲಿ (ತಮ್ಮ ಅಜ್ಜ ರಾಜೀವ್ ಗಾಂಧಿ ಮತ್ತು ಮಾವ ರಾಹುಲ್ ಗಾಂಧಿ ಓದಿದ ಶಾಲೆ) ಶಾಲಾ ಶಿಕ್ಷಣ ಪೂರೈಸಿದ್ದಾರೆ. ನಂತರ ಲಂಡನ್‌ನ ಸ್ಕೂಲ್ ಆಫ್ ಓರಿಯೆಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ (SOAS) ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ವೃತ್ತಿಯಲ್ಲಿ ವಿಷುಯಲ್ ಆರ್ಟಿಸ್ಟ್ ಆಗಿರುವ ರೈಹಾನ್, ವನ್ಯಜೀವಿ, ಸ್ಟ್ರೀಟ್ ಮತ್ತು ಕಮರ್ಷಿಯಲ್ ಫೋಟೋಗ್ರಫಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿದಾಯದ ಅಂಚಿನಲ್ಲಿ ಆಸೀಸ್ ಬ್ಯಾಟಿಂಗ್ ದಿಗ್ಗಜ : ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಉಸ್ಮಾನ್ ಖವಾಜಾ ನಿವೃತ್ತಿ ಘೋಷಣೆ



















