ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಅಸ್ಸಾಂನ ಗುವಾಹಟಿಯ ಬ್ರಹ್ಮಪುತ್ರ ನದಿಯಲ್ಲಿನ ವಿಲಾಸಿ ನೌಕೆ (ಕ್ರೂಸ್)ಯೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ‘ಪರೀಕ್ಷಾ ಪೇ ಚರ್ಚಾ-2026’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಸಂವಾದ ನಡೆಸಿದರು.
ನದಿ ತಟದಲ್ಲಿ ಪಾಠ
ಗುವಾಹಟಿಯ ಬ್ರಹ್ಮಪುತ್ರ ನದಿಯಲ್ಲಿ ಸಂಚರಿಸುವ ‘ಎಂವಿ ಚರೈಡಿಯೊ 2’ (MV Charaidew 2) ಪ್ರವಾಸಿ ಹಡಗಿನಲ್ಲಿ ಈ ಸಂವಾದ ನಡೆಯಿತು. ಪರೀಕ್ಷೆಯ ಒತ್ತಡವನ್ನು ನಿರ್ವಹಿಸುವುದು, ಶೈಕ್ಷಣಿಕ ಮತ್ತು ವೃತ್ತಿಜೀವನದ ಗುರಿಗಳನ್ನು ತಲುಪುವುದು ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬೋರ್ಡ್ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳನ್ನು ಯಾವುದೇ ಭಯವಿಲ್ಲದೆ, ಶಾಂತಚಿತ್ತದಿಂದ ಎದುರಿಸುವುದು ಹೇಗೆ ಎಂಬುದರ ಕುರಿತು ಅವರು ಸಲಹೆಗಳನ್ನು ನೀಡಿದರು.
25 ವಿದ್ಯಾರ್ಥಿಗಳು ಭಾಗಿ
ಈ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅಸ್ಸಾಂನ ವಿವಿಧ ಜಿಲ್ಲೆಗಳಾದ ಕಾಮರೂಪ್ ಮೆಟ್ರೋಪಾಲಿಟನ್, ಮೊರಿಗಾಂವ್, ದಿಬ್ರುಗಢ, ಕಚಾರ್, ಬಕ್ಸಾ, ಕೊಕ್ರಜಾರ್ ಮತ್ತು ನಲ್ಬರಿ ಸೇರಿದಂತೆ ಹಲವು ಭಾಗಗಳಿಂದ ಆಯ್ಕೆಯಾದ ಒಟ್ಟು 25 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರು ಸರ್ಕಾರಿ ಶಾಲೆಗಳು, ಜವಾಹರ್ ನವೋದಯ ವಿದ್ಯಾಲಯಗಳು, ಪಿಎಂ ಶ್ರೀ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು ಮತ್ತು ಖಾಸಗಿ ಶಾಲೆಗಳನ್ನು ಪ್ರತಿನಿಧಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿಯವರ ಜಲಸಂಚಾರದ ಹಿನ್ನೆಲೆಯಲ್ಲಿ ಬ್ರಹ್ಮಪುತ್ರ ನದಿಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ನದಿ ಪೊಲೀಸರು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಮುಂಜಾನೆಯಿಂದಲೇ ಗಸ್ತು ತಿರುಗುವ ಮೂಲಕ ಸುರಕ್ಷತೆಯನ್ನು ಖಾತ್ರಿಪಡಿಸಿದರು.
ಇದೇ ವೇಳೆ, ಈ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ಕಳೆದ ವರ್ಷ ಪ್ರಧಾನಿಯವರು ಕಾಜಿರಂಗಕ್ಕೆ ಭೇಟಿ ನೀಡಿದ ನಂತರ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿತ್ತು. ಅದೇ ರೀತಿ, ಈಗ ಬ್ರಹ್ಮಪುತ್ರ ನದಿಯ ಮೇಲಿನ ಈ ಸಂವಾದ ಕಾರ್ಯಕ್ರಮದಿಂದ ರಾಜ್ಯದ ನದಿ ಪ್ರವಾಸೋದ್ಯಮಕ್ಕೂ ದೊಡ್ಡ ಮಟ್ಟದ ಉತ್ತೇಜನ ಸಿಗುವ ನಿರೀಕ್ಷೆಯಿದೆ,” ಎಂದು ತಿಳಿಸಿದ್ದಾರೆ.
2018ರಿಂದ ಪ್ರತಿ ವರ್ಷವೂ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ವೇದಿಕೆಯಾಗಿ ಇದು ಗುರುತಿಸಿಕೊಂಡಿದೆ.
ಇದನ್ನೂ ಓದಿ: ಬಾಂಗ್ಲಾದಲ್ಲಿ ಪೈಶಾಚಿಕ ಕೃತ್ಯ : ಬಿಎನ್‌ಪಿ ನಾಯಕನ ಮನೆಗೆ ಬೆಂಕಿ, 7 ವರ್ಷದ ಪುತ್ರಿ ಸಜೀವ ದಹನ


















