ಲಕ್ನೋ, ಡಿ. 18: ದಟ್ಟ ಮಂಜಿನಿಂದಾಗಿ ಬುಧವಾರ ರದ್ದುಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4ನೇ ಟಿ20 ಅಂತರರಾಷ್ಟ್ರೀಯ ಪಂದ್ಯದ ಟಿಕೆಟ್ ದರವನ್ನು ವೀಕ್ಷಕರಿಗೆ ಸಂಪೂರ್ಣವಾಗಿ ಮರುಪಾವತಿಸುವುದಾಗಿ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಗುರುವಾರ ಪ್ರಕಟಿಸಿದೆ.
ಲಕ್ನೋದ ಏಕಾನಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವು ವಿಪರೀತ ಮಂಜಿನ ಕಾರಣದಿಂದ ರದ್ದುಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಹಣ ಹಿಂತಿರುಗಿಸುವ ಪ್ರಕ್ರಿಯೆಯನ್ನು ಯುಪಿಸಿಎ ಆರಂಭಿಸಿದೆ.
ಹಣ ವಾಪಸ್ ಪಡೆಯುವುದು ಹೇಗೆ?
ಆನ್‌ಲೈನ್ ಟಿಕೆಟ್: “ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರೇಕ್ಷಕರಿಗೆ ಅವರು ಹಣ ಪಾವತಿಸಿದ ಮೂಲ ಖಾತೆಗೇ (Original Mode of Payment) ಟಿಕೆಟ್ ಮೊತ್ತ ಜಮೆಯಾಗಲಿದೆ. ಮರುಪಾವತಿಗೆ ಸಂಬಂಧಿಸಿದ ಮಾಹಿತಿಯನ್ನು ನೋಂದಾಯಿತ ಇಮೇಲ್ ವಿಳಾಸಗಳಿಗೆ ಕಳುಹಿಸಲಾಗುತ್ತದೆ,” ಎಂದು ಯುಪಿಸಿಎ ಕಾರ್ಯದರ್ಶಿ ಪ್ರೇಮ್ ಮನೋಹರ್ ಗುಪ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಫ್‌ಲೈನ್ ಟಿಕೆಟ್: ಕೌಂಟರ್‌ಗಳಲ್ಲಿ ನೇರವಾಗಿ ಟಿಕೆಟ್ ಖರೀದಿಸಿದವರು, ಡಿಸೆಂಬರ್ 20, 21 ಮತ್ತು 22ರಂದು ಬೆಳಿಗ್ಗೆ 11.00 ರಿಂದ ಸಂಜೆ 6.00ರ ನಡುವೆ ಏಕಾನಾ ಕ್ರೀಡಾಂಗಣದ ಗೇಟ್ ಸಂಖ್ಯೆ 2ರಲ್ಲಿರುವ ಬಾಕ್ಸ್ ಆಫೀಸ್‌ನಲ್ಲಿ ಹಣ ಪಡೆಯಬಹುದಾಗಿದೆ.
ಆಫ್‌ಲೈನ್ ಟಿಕೆಟ್ ಹೊಂದಿರುವವರು ಹಣ ಪಡೆಯಲು ಖುದ್ದಾಗಿ ಹಾಜರಿರಬೇಕು. ಅಸಲಿ ಟಿಕೆಟ್, ಸರ್ಕಾರಿ ಗುರುತಿನ ಚೀಟಿ (ಐಡಿ) ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕೌಂಟರ್‌ನಲ್ಲಿ ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆಯ ನಂತರ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಉತ್ತರ ಭಾರತದಲ್ಲಿ ಚಳಿಗಾಲದ ಸಂದರ್ಭದಲ್ಲಿ ಮಂಜಿನ ಸಮಸ್ಯೆ ಸಾಮಾನ್ಯವಾಗಿದ್ದರೂ, ಬಿಸಿಸಿಐ ವೇಳಾಪಟ್ಟಿ ನಿಗದಿಪಡಿಸುವಾಗ ಎಡವಟ್ಟು ಮಾಡಿಕೊಂಡಿದೆ ಎಂಬ ಟೀಕೆಗಳು ಈ ಘಟನೆಯಿಂದ ಮತ್ತೆ ವ್ಯಕ್ತವಾಗಿವೆ. ಸರಣಿಯ ಅಂತಿಮ ಪಂದ್ಯ ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ : ಕೊಡಗು | ತೇಗದ ಮರ ಕಡಿದು ಅಕ್ರಮ ಸಾಗಾಟ.. ಓರ್ವ ಅರೆಸ್ಟ್



















