ಘಾಜಿಯಾಬಾದ್ (ಉತ್ತರ ಪ್ರದೇಶ): ಬಾಡಿಗೆ ಹಣದ ವಿಚಾರವಾಗಿ ಉಂಟಾದ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ದೆಹಲಿ ಸಮೀಪದ ಘಾಜಿಯಾಬಾದ್‌ನಲ್ಲಿ ನಡೆದಿದೆ. ಮನೆ ಮಾಲಕಿಯನ್ನೇ ಹತ್ಯೆಗೈದು, ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ವಿಲೇವಾರಿ ಮಾಡಲು ಯತ್ನಿಸುತ್ತಿದ್ದ ಬಾಡಿಗೆದಾರ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ದುರ್ದೈವಿಯನ್ನು ದೀಪ್ಶಿಕಾ ಶರ್ಮಾ (48) ಎಂದು ಗುರುತಿಸಲಾಗಿದೆ. ಇವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಈ ಕೃತ್ಯ ಎಸಗಿದ ಆರೋಪದ ಮೇಲೆ ಅಜಯ್ ಗುಪ್ತಾ ಮತ್ತು ಆಕೃತಿ ಗುಪ್ತಾ ಎಂಬ ದಂಪತಿಯನ್ನು ಬಂಧಿಸಲಾಗಿದೆ.
ಘಾಜಿಯಾಬಾದ್‌ನ ರಾಜ್ ನಗರ ಎಕ್ಸ್‌ಟೆನ್ಶನ್‌ನಲ್ಲಿರುವ ‘ಆರಾ ಕೈಮೇರಾ’ (Aura Chimera) ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದೆ. ಉಮೇಶ್ ಶರ್ಮಾ ಮತ್ತು ದೀಪ್ಶಿಕಾ ಶರ್ಮಾ ದಂಪತಿ ಇಲ್ಲಿ ಎರಡು ಫ್ಲ್ಯಾಟ್‌ಗಳನ್ನು ಹೊಂದಿದ್ದು, ಒಂದರಲ್ಲಿ ತಾವು ವಾಸಿಸುತ್ತಿದ್ದರು, ಮತ್ತೊಂದನ್ನು ಗುಪ್ತಾ ದಂಪತಿಗೆ ಬಾಡಿಗೆಗೆ ನೀಡಿದ್ದರು. ಸಾರಿಗೆ ಉದ್ಯಮದಲ್ಲಿರುವ ಅಜಯ್ ಗುಪ್ತಾ ಕಳೆದ ನಾಲ್ಕು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ.
ಬುಧವಾರದಂದು ಬಾಡಿಗೆ ಹಣ ಕೇಳಲು ದೀಪ್ಶಿಕಾ ಅವರು ಬಾಡಿಗೆದಾರರ ಫ್ಲ್ಯಾಟ್‌ಗೆ ತೆರಳಿದ್ದರು. ಈ ವೇಳೆ ವಾಗ್ವಾದ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿಗಳು ದೀಪ್ಶಿಕಾ ಅವರ ತಲೆಗೆ ಪ್ರೆಶರ್ ಕುಕ್ಕರ್‌ನಿಂದ ಹೊಡೆದು, ನಂತರ ದುಪಟ್ಟಾದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ವಿಲೇವಾರಿ ಮಾಡಲು ದೊಡ್ಡ ಸೂಟ್‌ಕೇಸ್ ಒಂದರಲ್ಲಿ ತುಂಬಿಟ್ಟಿದ್ದಾರೆ.
ಕೆಲಸದವಳ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದ ಆರೋಪಿಗಳು!
ದೀಪ್ಶಿಕಾ ಅವರು ಬಾಡಿಗೆದಾರರ ಮನೆಗೆ ಹೋದವರು ದೀರ್ಘಕಾಲದವರೆಗೂ ಹಿಂತಿರುಗದಿದ್ದಾಗ, ಅವರ ಮನೆಯ ಕೆಲಸದಾಕೆ ಮೀನಾ ಅವರಿಗೆ ಅನುಮಾನ ಬಂದಿದೆ. ಅಪಾರ್ಟ್ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೀಪ್ಶಿಕಾ ಅವರು ಗುಪ್ತಾ ಅವರ ಫ್ಲ್ಯಾಟ್‌ಗೆ ಪ್ರವೇಶಿಸಿದ್ದು ಕಂಡಿದೆ, ಆದರೆ ಹೊರಗೆ ಬಂದಿರಲಿಲ್ಲ.
ಇದೇ ಸಮಯದಲ್ಲಿ, ಆರೋಪಿ ದಂಪತಿ ದೊಡ್ಡ ಸೂಟ್‌ಕೇಸ್‌ನೊಂದಿಗೆ ಆಟೋ ರಿಕ್ಷಾವನ್ನು ಕರೆಸಿ ಹೊರಡಲು ಸಿದ್ಧರಾಗಿದ್ದರು. ತಕ್ಷಣ ಎಚ್ಚೆತ್ತುಕೊಂಡ ಮೀನಾ, ಆಟೋವನ್ನು ತಡೆದು, “ನಮ್ಮ ‘ದೀದಿ’ (ದೀಪ್ಶಿಕಾ) ಸಿಗುವವರೆಗೂ ನೀವು ಎಲ್ಲಿಗೂ ಹೋಗುವಂತಿಲ್ಲ,” ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಆರೋಪಿಗಳು ಅನಿವಾರ್ಯವಾಗಿ ಫ್ಲ್ಯಾಟ್‌ಗೆ ಮರಳಬೇಕಾಯಿತು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಸೂಟ್‌ಕೇಸ್‌ನಲ್ಲಿದ್ದ ದೀಪ್ಶಿಕಾ ಅವರ ಮೃತದೇಹ ಪತ್ತೆಯಾಗಿದೆ. ಕೆಲಸದಾಕೆ ಮೀನಾ ಅವರ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ ಆರೋಪಿಗಳು ಶವವನ್ನು ವಿಲೇವಾರಿ ಮಾಡುವ ಮುನ್ನವೇ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಅಂತರ್ ಧರ್ಮೀಯ ವಿವಾಹದ ಕಲಹ : ಹೆತ್ತವರನ್ನೇ ಹತ್ಯೆಗೈದು, ದೇಹ ತುಂಡರಿಸಿ ನದಿಗೆ ಎಸೆದ ಎಂಜಿನಿಯರ್ ಪುತ್ರ



















