ನವದೆಹಲಿ: ಸಾಮಾನ್ಯವಾಗಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಆದರೆ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿರುವ ಮಹಾರಾಷ್ಟ್ರದ ಯುವ ಆಟಗಾರ ಓಂಕಾರ್ ತರ್ಮಲೆ ಅವರ ಯಶೋಗಾಥೆಯ ಹಿಂದೆ ಕೇವಲ ಒಬ್ಬ ಮಹಿಳೆಯಲ್ಲ, ಒಂದು ಇಡೀ ಮಹಿಳಾ ಸ್ವಸಹಾಯ ಸಂಘದ ಶಕ್ತಿಯೇ ಇದೆ!
ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ, ಮೂಲಬೆಲೆ 30 ಲಕ್ಷ ರೂ.ಗಳಿಗೆ ಹರಾಜಾದ ಓಂಕಾರ್ ಅವರ ಕಥೆ ಎಂತಹವರನ್ನೂ ಭಾವುಕರನ್ನಾಗಿಸುವಂತಿದೆ. ಥಾಣೆ ಜಿಲ್ಲೆಯ ಶಹಾಪುರ ತಾಲೂಕಿನ ‘ಶೇರ್’ ಎಂಬ ಪುಟ್ಟ ಹಳ್ಳಿಯಿಂದ ಬಂದಿರುವ ಈ ಪ್ರತಿಭೆಯ ಕ್ರಿಕೆಟ್ ಪಯಣ ಸುಲಭದ್ದಾಗಿರಲಿಲ್ಲ. ಆರ್ಥಿಕ ಸಂಕಷ್ಟದ ನಡುವೆಯೂ ಅರಳಿದ ಈ ಪ್ರತಿಭೆಗೆ ಇದೀಗ ಐಪಿಎಲ್ ಎಂಬ ಜಾಗತಿಕ ವೇದಿಕೆ ಸಿಕ್ಕಿದೆ.
ತ್ರಿಪುರ ಪಯಣಕ್ಕೆ ಕೈಹಿಡಿದ ಮಹಿಳಾ ಸಂಘ
ಓಂಕಾರ್ ಅವರ ತಂದೆ ತುಕಾರಾಂ ತರ್ಮಲೆ ಅವರು ತಮ್ಮ ಮಗನ ಹೋರಾಟದ ಹಾದಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಓಂಕಾರ್ ಕ್ರಿಕೆಟ್ ಆಡಲು ವಿವಿಧ ಕಡೆಗಳಿಗೆ ಪ್ರಯಾಣಿಸುತ್ತಿದ್ದರು. ಆದರೆ, ಅವರ ಕ್ರಿಕೆಟ್ ಬದುಕಿನ ಟರ್ನಿಂಗ್ ಪಾಯಿಂಟ್ ಎಂದರೆ ತ್ರಿಪುರಕ್ಕೆ ತೆರಳಿದ್ದು. ಆ ಸಮಯದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಮಗನನ್ನು ಕ್ರಿಕೆಟ್ ಆಡಲು ತ್ರಿಪುರಕ್ಕೆ ಕಳುಹಿಸಲು ಹಣದ ಅವಶ್ಯಕತೆಯಿತ್ತು.
ಆ ಕಷ್ಟದ ಸಮಯದಲ್ಲಿ ನೆರವಿಗೆ ಬಂದಿದ್ದೇ ಊರಿನ ಮಹಿಳಾ ಸ್ವಸಹಾಯ ಸಂಘ. “ನಾನು ಸ್ಥಳೀಯ ಮಹಿಳೆಯರ ಸ್ವಸಹಾಯ ಗುಂಪಿನ ಬಳಿ 3 ಲಕ್ಷ ರೂ. ಸಾಲ ನೀಡುವಂತೆ ಕೇಳಿಕೊಂಡೆ. ಅವರು ಆ ಹಣವನ್ನು ನೀಡಿದರು. ಆ ಹಣದಿಂದಲೇ ನಾವು ಓಂಕಾರ್‌ನನ್ನು ತ್ರಿಪುರಕ್ಕೆ ಕಳುಹಿಸಲು ಸಾಧ್ಯವಾಯಿತು,” ಎಂದು ತುಕಾರಾಂ ಅವರು ನೆನಪಿಸಿಕೊಂಡಿದ್ದಾರೆ. ಆ 3 ಲಕ್ಷ ರೂ. ಸಾಲ ಇಂದು ಅವರ ಮಗನನ್ನು ಕೋಟಿಗಳ ಮೌಲ್ಯದ ಲೀಗ್‌ಗೆ ತಲುಪಿಸಿದೆ.
ಕೋಚ್‌ಗಳ ಮೆಚ್ಚುಗೆ ಮತ್ತು ಎಂಪಿಎಲ್ ತಿರುವು
ತ್ರಿಪುರದಲ್ಲಿ ಓಂಕಾರ್ ನೀಡಿದ ಉನ್ನತ ಮಟ್ಟದ ಪ್ರದರ್ಶನ ಎಷ್ಟರಮಟ್ಟಿಗೆ ಇತ್ತೆಂದರೆ, ಅಲ್ಲಿನ ಕೋಚ್‌ಗಳು ಓಂಕಾರ್‌ನನ್ನು ಅಲ್ಲಿಯೇ ಉಳಿಸಿಕೊಳ್ಳಲು ಬಯಸಿದ್ದರು. ಆದರೆ, ತಂದೆ ತುಕಾರಾಂ ಅದಕ್ಕೆ ಒಪ್ಪಲಿಲ್ಲ. ನಂತರ ಕಲ್ಯಾಣ್‌ನಲ್ಲಿದ್ದ ಸ್ಥಳೀಯ ಕೋಚ್ ಒಬ್ಬರು ಓಂಕಾರ್‌ನಲ್ಲಿರುವ ಅದ್ಭುತ ಪ್ರತಿಭೆಯನ್ನು ಗುರುತಿಸಿ, “ಈ ಹುಡುಗ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡುವ ಧೈರ್ಯ ಮತ್ತು ಸಾಮರ್ಥ್ಯ ಹೊಂದಿದ್ದಾನೆ,” ಎಂದು ಭವಿಷ್ಯ ನುಡಿದಿದ್ದರು.
ನಂತರ ಮುಂಬೈಗೆ ಮರಳಿದ ಓಂಕಾರ್, ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (MPL) ಆಡಲು ವಿಮಾನ ಏರಿದರು. ಅಲ್ಲಿ ಅವರು ನೀಡಿದ ಪ್ರದರ್ಶನ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಓಂಕಾರ್, ಸ್ಕೌಟ್ಸ್‌ಗಳ ಕಣ್ಣಿಗೆ ಬಿದ್ದರು.
ಕಾವ್ಯ ಮಾರನ್ ಬಿಡ್ ಮತ್ತು ಕುಟುಂಬದ ಸಂಭ್ರಮ
ಹರಾಜಿನಲ್ಲಿ ವೇಗದ ಬೌಲರ್‌ಗಳ ಸರದಿ ಬಂದಾಗ ಓಂಕಾರ್ ಹೆಸರು ಪ್ರಸ್ತಾಪವಾಯಿತು. ಸನ್ ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲೀಕ ಕಾವ್ಯ ಮಾರನ್ ಅವರು ಸರಿಯಾದ ಸಮಯಕ್ಕೆ ಪ್ಯಾಡಲ್ ಎತ್ತಿ, 30 ಲಕ್ಷ ರೂ. ಮೂಲಬೆಲೆಗೆ ಓಂಕಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡರು. ಈ ಸುದ್ದಿ ತಿಳಿಯುತ್ತಿದ್ದಂತೆ ತರ್ಮಲೆ ಕುಟುಂಬದಲ್ಲಿ ಸಂಭ್ರಮ ಮುಗಿಲುಮುಟ್ಟಿತ್ತು.
“ನಿನ್ನ ತಂದೆ ಪಟ್ಟಷ್ಟು ಕಷ್ಟವನ್ನು ನೀನು ಪಡಬೇಕಾಗಿಲ್ಲ. ನೀನು ಕೇವಲ ನಿನ್ನ ಆಟದ ಕಡೆ ಗಮನ ಕೊಡು ಎಂದು ಕೋಚ್ ಯಾವಾಗಲೂ ಓಂಕಾರ್‌ಗೆ ಹೇಳುತ್ತಿದ್ದರು. ಇಂದು ನನ್ನ ಮಗ ನಮ್ಮೆಲ್ಲರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದ್ದಾನೆ,” ಎಂದು ತಂದೆ ತುಕಾರಾಂ ಭಾವುಕರಾಗಿ ನುಡಿದಿದ್ದಾರೆ. ಹಳ್ಳಿಯ ಬಡ ಪ್ರತಿಭೆಯೊಬ್ಬನಿಗೆ ಊರಿನ ಮಹಿಳಾ ಸಂಘ ನೀಡಿದ ಆರ್ಥಿಕ ನೆರವು, ಇಂದು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಭರವಸೆಯಾಗಿ ಮೂಡಿಬಂದಿದೆ.
ಇದನ್ನೂ ಓದಿ: ವಿಜಯ್ ಹಜಾರೆ ಸಮರ : ಕರ್ನಾಟಕ ತಂಡಕ್ಕೆ ರಾಹುಲ್, ಪ್ರಸಿದ್ಧ್ ಕೃಷ್ಣ ಆನೆಬಲ



















