ಅಬುಧಾಬಿ : ಮಂಗಳವಾರ (ಡಿ.16) ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಮಿನಿ ಹರಾಜು ಪ್ರಕ್ರಿಯೆ ಹಲವು ಕಾರಣಗಳಿಂದ ವಿಶಿಷ್ಟವಾಗಿತ್ತು. ಒಟ್ಟು 77 ಆಟಗಾರರು ಮಾರಾಟವಾದ ಈ ಹರಾಜಿನಲ್ಲಿ ಫ್ರಾಂಚೈಸಿಗಳ ರಣತಂತ್ರ, ಯುವ ಪ್ರತಿಭೆಗಳ ಮೇಲಿನ ನಂಬಿಕೆ ಮತ್ತು ಕೆಲವೊಂದು ಅಚ್ಚರಿಯ ನಡೆಗಳು ಕ್ರಿಕೆಟ್ ಪಂಡಿತರ ಗಮನ ಸೆಳೆದವು.
ಹರಾಜಿನ ಪ್ರಮುಖ 10 ಹೈಲೈಟ್ಸ್ ಮತ್ತು ಅದರಿಂದ ನಾವು ಕಲಿತ ಪಾಠಗಳು ಇಲ್ಲಿವೆ :
- ಹರಾಜು ತಂತ್ರದಲ್ಲಿ ಸಂಪೂರ್ಣ ಬದಲಾವಣೆ :
ಆರಂಭದಲ್ಲಿ ಡೇವಿಡ್ ಮಿಲ್ಲರ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ಹೊರತುಪಡಿಸಿ, ಜೇಕ್ ಫ್ರೇಸರ್-ಮೆಕ್ಗರ್ಕ್, ಡೆವೊನ್ ಕಾನ್ವೆ ಅವರಂತಹ ಸ್ಟಾರ್ ಆಟಗಾರರು ಮಾರಾಟವಾಗದೆ ಉಳಿದರು. ಫ್ರಾಂಚೈಸಿಗಳು ಆರಂಭದಲ್ಲೇ ಹಣ ಖಾಲಿ ಮಾಡಿಕೊಳ್ಳಲು ಇಷ್ಟಪಡಲಿಲ್ಲ. ಆದರೆ ಕೊನೆಯಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನಂತಹ ತಂಡಗಳು ಉಳಿಸಿಕೊಂಡಿದ್ದ ಹಣವನ್ನು ಬಳಸಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಬುಟ್ಟಿಗೆ ಹಾಕಿಕೊಂಡವು. - ಅನ್‌ಕ್ಯಾಪ್ಡ್ ಆಟಗಾರರ ದರ್ಬಾರ್ :
ಹಿಂದೆಂದಿಗಿಂತಲೂ ಈ ಬಾರಿ ಅನ್‌ಕ್ಯಾಪ್ಡ್ (ರಾಷ್ಟ್ರೀಯ ತಂಡಕ್ಕೆ ಆಡದ) ಭಾರತೀಯ ಆಟಗಾರರಿಗೆ ಭಾರಿ ಬೇಡಿಕೆ ಇತ್ತು. ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರಿಗೆ ಸಿಎಸ್‌ಕೆ ತಲಾ 14.20 ಕೋಟಿ ರೂ. ನೀಡಿದ್ದು ಇದಕ್ಕೆ ಸಾಕ್ಷಿ. ಆಕಿಬ್ ನಬಿ ಕೂಡ 8.40 ಕೋಟಿ ರೂ. ಬಾಚಿಕೊಂಡರು. - ಸ್ಕೌಟಿಂಗ್ ತಂಡಗಳ ಪರಿಶ್ರಮ :
ಸನ್ ರೈಸರ್ಸ್ ಹೈದರಾಬಾದ್ ತಂಡವು ಹರಾಜಿನಲ್ಲಿ ಕೇವಲ ಅನ್‌ಕ್ಯಾಪ್ಡ್ ಆಟಗಾರರನ್ನು ಖರೀದಿಸಿತು. ಇದು ಸ್ಕೌಟಿಂಗ್ (ಪ್ರತಿಭೆ ಶೋಧ) ತಂಡಗಳ ಕಠಿಣ ಪರಿಶ್ರಮದ ಫಲ ಎಂದು ಕೋಚ್ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ. ದೇಶದ ಮೂಲೆಮೂಲೆಗಳಿಂದ ಪ್ರತಿಭೆಗಳನ್ನು ಹುಡುಕಿ ತರುವಲ್ಲಿ ಸ್ಕೌಟ್‌ಗಳು ಯಶಸ್ವಿಯಾಗಿದ್ದಾರೆ. - ಗೊಂದಲವಿಲ್ಲದ ಸ್ಪಷ್ಟ ನಡೆ :
ಇದು ಮಿನಿ ಹರಾಜಾಗಿದ್ದರೂ, ಗೊಂದಲದ ಸನ್ನಿವೇಶಗಳು ಕಡಿಮೆ ಇದ್ದವು. ಉದಾಹರಣೆಗೆ, ಡೆಲ್ಲಿ ಕ್ಯಾಪಿಟಲ್ಸ್ ತನಗೆ ಬೇಕಾದ ಆಟಗಾರರಿಗಷ್ಟೇ ಬಿಡ್ ಮಾಡಿತು. ಮತೀಶ ಪತಿರಾನಗಾಗಿ 35 ಬಿಡ್‌ಗಳನ್ನು ಸಲ್ಲಿಸಿದರೂ, ಹಣದ ಕೊರತೆಯಿಂದ ಅವರನ್ನು ಬಿಟ್ಟುಕೊಡಬೇಕಾಯಿತು. - ದೇಶೀಯ ಟಿ20 ಲೀಗ್‌ಗಳ ಕೊಡುಗೆ :
ಹರಾಜಿನಲ್ಲಿ ಮಾರಾಟವಾದ ಎಷ್ಟೋ ಆಟಗಾರರು ದೇಶೀಯ ಟಿ20 ಲೀಗ್‌ಗಳಲ್ಲಿ ಮಿಂಚಿದವರು. ಪಂಜಾಬ್, ದೆಹಲಿ, ಹರಿಯಾಣ ಮತ್ತು ಯುಪಿ ಲೀಗ್‌ಗಳಲ್ಲಿ ಆಡಿದ ಆಟಗಾರರು ಐಪಿಎಲ್‌ಗೆ ಲಗ್ಗೆ ಇಟ್ಟಿದ್ದಾರೆ. ಉಮ್ರಾನ್ ಮಲಿಕ್, ಆಕಾಶ್ ಮಧ್ವಾಲ್ ಅವರ ಹಾದಿಯಲ್ಲೇ ಈಗ ಹೊಸಬರು ಸಾಗುತ್ತಿದ್ದಾರೆ. - ಲೈಫ್ ಲೈನ್ ಪಡೆದ ಪೃಥ್ವಿ, ಸರ್ಫರಾಜ್ :
ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಪೃಥ್ವಿ ಶಾ ಮತ್ತು ಸರ್ಫರಾಜ್ ಖಾನ್ ಅವರಿಗೆ ಐಪಿಎಲ್ ಮರುಜೀವ ನೀಡಿದೆ. ಎರಡು ಬಾರಿ ಮಾರಾಟವಾಗದೆ ಉಳಿದಿದ್ದ ಪೃಥ್ವಿ ಶಾ ಅವರನ್ನು ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಇದು ಅವರಿಗೆ ಸಿಕ್ಕಿರುವ ಕೊನೆಯ ಅವಕಾಶವಿರಬಹುದು. - ವಿದೇಶಿ ಬೌಲರ್, ದೇಸಿ ಬ್ಯಾಟರ್ :
ಬ್ಯಾಟಿಂಗ್‌ಗಾಗಿ ಭಾರತೀಯ ಆಟಗಾರರ ಮೇಲೆ (ಕಾರ್ತಿಕ್ ಶರ್ಮಾ, ವೆಂಕಟೇಶ್ ಅಯ್ಯರ್) ಅವಲಂಬಿತವಾದರೆ, ಬೌಲಿಂಗ್‌ಗಾಗಿ ವಿದೇಶಿ ವೇಗಿಗಳ (ಮತೀಶ ಪತಿರಾನ, ಮುಸ್ತಫಿಜುರ್ ರೆಹಮಾನ್) ಮೇಲೆ ಫ್ರಾಂಚೈಸಿಗಳು ಒಲವು ತೋರಿದವು. - ಕಡಿಮೆ ಬೆಲೆಗೆ ಸ್ಟಾರ್ ಆಟಗಾರರು :
ಡೇವಿಡ್ ಮಿಲ್ಲರ್, ಬೆನ್ ಡಕೆಟ್, ಕ್ವಿಂಟನ್ ಡಿ ಕಾಕ್ ಅವರಂತಹ ಸ್ಟಾರ್ ಆಟಗಾರರು ಮೂಲ ಬೆಲೆಗೆ (Base Price) ಮಾರಾಟವಾದರು. ವನಿಂದು ಹಸರಂಗ ಕೂಡ ಕೇವಲ 2 ಕೋಟಿ ರೂ.ಗೆ ಲಕ್ನೋ ಪಾಲಾದರು. ಇವು ನಿಜಕ್ಕೂ ‘ಸ್ಟೀಲ್ ಡೀಲ್’ಗಳು. - ‘ಡ್ಯಾಡೀಸ್ ಆರ್ಮಿ’ ಈಗ ‘ಕಿಡ್ಸ್ ಆರ್ಮಿ’! :
ಹಿರಿಯ ಆಟಗಾರರಿಗೆ ಮಣೆ ಹಾಕುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ಈ ಬಾರಿ ಸಂಪೂರ್ಣ ಯೂ ಟರ್ನ್ ಹೊಡೆದಿದೆ. ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ ಅವರಂತಹ ಯುವಕರನ್ನು ಖರೀದಿಸುವ ಮೂಲಕ ‘ಡ್ಯಾಡೀಸ್ ಆರ್ಮಿ’ ಎಂಬ ಹಣೆಪಟ್ಟಿಯನ್ನು ಕಳಚಿಕೊಂಡು ‘ಕಿಡ್ಸ್ ಆರ್ಮಿ’ ಆಗಿ ಪರಿವರ್ತನೆಗೊಂಡಿದೆ. - ಮುಂಬೈ ಇಂಡಿಯನ್ಸ್ ತಂತ್ರ :
ಕೈಯಲ್ಲಿ ಕೇವಲ 2.75 ಕೋಟಿ ರೂ. ಇದ್ದರೂ ಮುಂಬೈ ಇಂಡಿಯನ್ಸ್ ಹರಾಜಿನಲ್ಲಿ ಸದ್ದು ಮಾಡಿತು. ಬೇರೆ ತಂಡಗಳ ಲೆಕ್ಕಾಚಾರ ತಲೆಕೆಳಗಾಗಿಸಲು ಬಿಡ್‌ಗಳಲ್ಲಿ ಮೂಗು ತೂರಿಸಿತು. ಅಂತಿಮವಾಗಿ ಕ್ವಿಂಟನ್ ಡಿ ಕಾಕ್ ಅವರನ್ನು 1 ಕೋಟಿ ರೂ.ಗೆ ಖರೀದಿಸಿ ಸ್ಮಾರ್ಟ್ ನಡೆ ಪ್ರದರ್ಶಿಸಿತು.
ಇದನ್ನೂ ಓದಿ : ಐಪಿಎಲ್ 2026 | ವಿದೇಶಿ ತಾರೆಗಳಿಗಿಂತ ದೇಸಿ ಪ್ರತಿಭೆಗಳೇ ದುಬಾರಿ.. ಹರಾಜಿನಲ್ಲಿ ಟ್ರೆಂಡ್ ಬದಲಾಗಿದ್ದು ಏಕೆ?



















