ನವದೆಹಲಿ: ಬಹುಕಾಲದಿಂದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ದೆಹಲಿಯ ನ್ಯಾಯಾಲಯವೊಂದು ದೊಡ್ಡ ಮಟ್ಟದ ನಿರಾಳತೆ ನೀಡಿದೆ. ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಆರೋಪ ಪಟ್ಟಿ ಅಥವಾ ಪ್ರಾಸಿಕ್ಯೂಷನ್ ದೂರನ್ನು ಮಾನ್ಯ ಮಾಡಲು ರೌಸ್ ಅವೆನ್ಯೂ ನ್ಯಾಯಾಲಯ ನಿರಾಕರಿಸಿದೆ.
ನ್ಯಾಯಾಲಯದ ಮಹತ್ವದ ಆದೇಶ
ವಿಶೇಷ ನ್ಯಾಯಾಧೀಶ (ಪಿಸಿ ಆಕ್ಟ್) ವಿಶಾಲ್ ಗೋಗ್ನೆ ಅವರು ಇಡಿ ಸಲ್ಲಿಸಿದ್ದ ದೂರನ್ನು ತಳ್ಳಿಹಾಕಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇ.ಡಿ. ಸಲ್ಲಿಸಿರುವ ದೂರು ಕಾನೂನಿನ ಪ್ರಕಾರ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದೇಶಕ್ಕೆ ಪ್ರಮುಖ ಕಾರಣಗಳು:
ಖಾಸಗಿ ದೂರಿನ ಆಧಾರ: ಈ ಪ್ರಕರಣವು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ರೂಪಿತವಾಗಿದೆಯೇ ಹೊರತು, ಪೊಲೀಸ್ ಎಫ್‌ಐಆರ್ ಆಧಾರದ ಮೇಲಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಎಫ್‌ಐಆರ್ ಇಲ್ಲದೆ ಪಿಎಂಎಲ್‌ಎ ಅಡಿಯಲ್ಲಿ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂಬುದು ನ್ಯಾಯಾಲಯದ ಅಭಿಮತವಾಗಿದೆ.
ಅಕಾಲಿಕ ತೀರ್ಮಾನ: ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಹೀಗಿರುವಾಗ, ಇ.ಡಿ. ಸಲ್ಲಿಕೆಯ ಬಗ್ಗೆ ಈಗಲೇ ತೀರ್ಪು ನೀಡುವುದು “ಅಕಾಲಿಕ ಮತ್ತು ವಿವೇಚನಾರಹಿತ”ವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮುಂದೇನು?
ನ್ಯಾಯಾಲಯವು ಇ.ಡಿ. ದೂರನ್ನು ತಿರಸ್ಕರಿಸಿದ್ದರೂ, ಇ.ಡಿ. ತನಿಖಾ ಸಂಸ್ಥೆಯು ತನ್ನ ತನಿಖೆಯನ್ನು ಮುಂದುವರಿಸಬಹುದು ಮತ್ತು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ, ಇ.ಡಿ. ಕಾನೂನು ತಂಡವು ರೌಸ್ ಅವೆನ್ಯೂ ಕೋರ್ಟ್ ಆದೇಶವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.
ಆರೋಪಿಗಳು ಯಾರು?
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಲ್ಲದೆ, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಯಂಗ್ ಇಂಡಿಯನ್ ಸಂಸ್ಥೆ, ಡೋಟೆಕ್ಸ್ ಮರ್ಕಂಡೈಸ್ ಮತ್ತು ಸುನಿಲ್ ಭಂಡಾರಿ ಅವರನ್ನು ಇ.ಡಿ. ಆರೋಪಿಗಳನ್ನಾಗಿ ಹೆಸರಿಸಿತ್ತು.
ಕಾಂಗ್ರೆಸ್ ಪ್ರತಿಕ್ರಿಯೆ:
ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, “ಇದು ವಿಚಿತ್ರವಾದ ಪ್ರಕರಣ. ಇಲ್ಲಿ ಒಂದು ಪೈಸೆಯಷ್ಟು ಹಣ ವರ್ಗಾವಣೆಯಾಗಿಲ್ಲ ಅಥವಾ ಒಂದಿಂಚು ಆಸ್ತಿಯೂ ಕೈ ಬದಲಾಗಿಲ್ಲ. ಎಜೆಎಲ್ (AJL) ಆಸ್ತಿಗಳೆಲ್ಲವೂ ಕಂಪನಿಯ ಬಳಿಯೇ ಇವೆ. ಆದರೂ ಬಿಜೆಪಿ ವಿನಾಕಾರಣ ಗದ್ದಲ ಸೃಷ್ಟಿಸುತ್ತಿದೆ,” ಎಂದು ವಾದಿಸಿದ್ದಾರೆ.
ಏನಿದು ಪ್ರಕರಣ?:
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾತೃ ಸಂಸ್ಥೆಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಅನ್ನು ‘ಯಂಗ್ ಇಂಡಿಯನ್’ ಕಂಪನಿ ಮೂಲಕ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ 2012ರಲ್ಲಿ ಸುಬ್ರಮಣಿಯನ್ ಸ್ವಾಮಿ ದೂರು ದಾಖಲಿಸಿದ್ದರು. ಕಾಂಗ್ರೆಸ್ ನಾಯಕರು ಕೇವಲ 50 ಲಕ್ಷ ರೂ. ನೀಡಿ, ದೆಹಲಿ ಮತ್ತು ಮುಂಬೈನಲ್ಲಿರುವ ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ವಂಚನೆಯಿಂದ ವಶಪಡಿಸಿಕೊಂಡಿದ್ದಾರೆ ಎಂಬುದು ಅವರ ಆರೋಪವಾಗಿತ್ತು.
ಇದನ್ನೂ ಓದಿ: ವೇದಿಕೆಯಲ್ಲೇ ಮಹಿಳಾ ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ ನಿತೀಶ್ : ಜೆಡಿಯು ಸಮರ್ಥನೆ!



















