ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಹೊಸದೊಂದು ಬಿರುಗಾಳಿ ಎದ್ದಿದೆ. ರಾಜ್ಯದ ಕರಡು ಮತದಾರರ ಪಟ್ಟಿಯಿಂದ ಬರೋಬ್ಬರಿ 58 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಇದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಲ್ಲಿನ ದೋಷಗಳು ಮತ್ತು ನಕಲಿ ಹೆಸರುಗಳನ್ನು ಸರಿಪಡಿಸುವ ಕಾರ್ಯವನ್ನು ಕೈಗೊಂಡಿತ್ತು. ಅದರಂತೆ ಈಗ ಕರಡು ಪಟ್ಟಿ ಪ್ರಕಟವಾಗಿದ್ದು, 58 ಲಕ್ಷ ಹೆಸರುಗಳು ಡಿಲೀಟ್ ಆಗಿವೆ. ಆಯೋಗ ನೀಡಿರುವ ಮಾಹಿತಿಯ ಪ್ರಕಾರ, ತೆಗೆದುಹಾಕಲಾದ ಹೆಸರುಗಳಲ್ಲಿ 24 ಲಕ್ಷ ಮಂದಿ ಮೃತಪಟ್ಟವರು, 19 ಲಕ್ಷ ಜನರು ಸ್ಥಳಾಂತರಗೊಂಡವರು, 12 ಲಕ್ಷ ಜನರು ಪತ್ತೆಯಿಲ್ಲದವರು ಮತ್ತು 1.3 ಲಕ್ಷ ಹೆಸರುಗಳು ನಕಲಿ ಎಂದು ಗುರುತಿಸಲಾಗಿದೆ.
ಫೆಬ್ರವರಿಯಲ್ಲಿ ಅಂತಿಮ ಪಟ್ಟಿ ಪ್ರಕಟ
ಈಗ ಪ್ರಕಟವಾಗಿರುವುದು ಕರಡು ಪಟ್ಟಿ ಮಾತ್ರವಾಗಿದ್ದು, ಇದು ಪರಿಷ್ಕರಣೆಯ ಮೊದಲ ಹಂತವಾಗಿದೆ. ಹೆಸರು ತಪ್ಪಾಗಿ ಕೈಬಿಡಲ್ಪಟ್ಟಿದೆ ಎಂದು ಭಾವಿಸುವ ಅರ್ಹ ಮತದಾರರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ, ಮುಂದಿನ ವರ್ಷದ ಫೆಬ್ರವರಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಅಂತಿಮ ಪಟ್ಟಿ ಪ್ರಕಟವಾದ ಬಳಿಕವಷ್ಟೇ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ. ಗಮನಾರ್ಹವೆಂದರೆ, 2002ರ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂತಹ ಬೃಹತ್ ಮಟ್ಟದ ಪರಿಷ್ಕರಣೆ (ಎಸ್ಐಆರ್) ನಡೆದಿದೆ.
ಮಮತಾ ಬ್ಯಾನರ್ಜಿ ಆಕ್ರೋಶ
ಚುನಾವಣಾ ಆಯೋಗದ ಈ ನಡೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಆಯೋಗವು ಉದ್ದೇಶಪೂರ್ವಕವಾಗಿ ಎಸ್ಐಆರ್ ನೆಪದಲ್ಲಿ ಲಕ್ಷಾಂತರ ಅರ್ಹ ಮತದಾರರ, ವಿಶೇಷವಾಗಿ ಬಡವರು ಮತ್ತು ಅಲ್ಪಸಂಖ್ಯಾತರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇತ್ತೀಚೆಗೆ ಕೃಷ್ಣಾನಗರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಮಮತಾ, “ಎಸ್ಐಆರ್ ಹೆಸರಿನಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಚುನಾವಣೆಯ ಸಮಯದಲ್ಲಿ ದೆಹಲಿಯಿಂದ ಪೊಲೀಸರನ್ನು ಕರೆಸಿ ಬೆದರಿಸುವ ತಂತ್ರವಿದು. ಒಂದು ವೇಳೆ ನಿಮ್ಮ ಹೆಸರು ಪಟ್ಟಿಯಿಂದ ಮಾಯವಾಗಿದ್ದರೆ, ಸುಮ್ಮನೆ ಕೂರಬೇಡಿ. ಅಡುಗೆ ಮನೆಯಲ್ಲಿ ಬಳಸುವ ಸೌಟು, ಸಲಕರಣೆಗಳನ್ನೇ ಹಿಡಿದುಕೊಂಡು ಪ್ರತಿಭಟಿಸಿ. ಮಹಿಳೆಯರೇ ಈ ಹೋರಾಟದ ಮುಂಚೂಣಿಯಲ್ಲಿರಬೇಕು,” ಎಂದು ಕರೆ ನೀಡಿದ್ದರು.
ಅಕ್ರಮ ವಲಸಿಗರ ರಕ್ಷಣೆ: ಬಿಜೆಪಿ ಆರೋಪ
ಮಮತಾ ಬ್ಯಾನರ್ಜಿ ಅವರ ಆರೋಪಗಳಿಗೆ ತಿರುಗೇಟು ನೀಡಿರುವ ಬಿಜೆಪಿ, ಟಿಎಂಸಿ ಅಕ್ರಮ ವಲಸಿಗರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂದು ದೂರಿದೆ. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮಾತನಾಡಿ, “ಮತದಾರರ ಪಟ್ಟಿಯಿಂದ ಮೃತರು, ನಕಲಿ ಮತದಾರರು ಮತ್ತು ಅಕ್ರಮ ವಲಸಿಗರ ಹೆಸರುಗಳನ್ನು ತೆಗೆದುಹಾಕುತ್ತಿರುವುದರಿಂದ ಮಮತಾ ಬ್ಯಾನರ್ಜಿ ಅವರಿಗೆ ನಡುಕ ಹುಟ್ಟಿದೆ. ಟಿಎಂಸಿ ಮತ್ತು ಬಿಜೆಪಿ ನಡುವಿನ ಮತಗಳ ಅಂತರ ಕೇವಲ 22 ಲಕ್ಷ. ಹೀಗಾಗಿ ತಮ್ಮ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭಯದಿಂದ ದೀದಿ ಗದ್ದಲ ಸೃಷ್ಟಿಸುತ್ತಿದ್ದಾರೆ,” ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮುನ್ನ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವಿಪರೀತ ಒತ್ತಡದಿಂದಾಗಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿ ಟಿಎಂಸಿ ಆಯೋಗದ ವಿರುದ್ಧ ಹರಿಹಾಯ್ದಿತ್ತು. ಆಯೋಗದ ಕೈಯಲ್ಲಿ ರಕ್ತದ ಕಲೆಗಳಿವೆ ಎಂದು ಟೀಕಿಸಿತ್ತು. ಒಟ್ಟಿನಲ್ಲಿ ಕರಡು ಪಟ್ಟಿಯ ಪ್ರಕಟಣೆಯು ಬಂಗಾಳದ ರಾಜಕೀಯ ರಂಗದಲ್ಲಿ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ನಾಂದಿ ಹಾಡಿದೆ.
ಇದನ್ನೂ ಓದಿ: ಮೆಕ್ಸಿಕೋದಲ್ಲಿ ಖಾಸಗಿ ಜೆಟ್ ಪತನ | 10 ಮಂದಿ ಮೃತಪಟ್ಟಿರುವ ಶಂಕೆ



















