ಬೆಂಗಳೂರು: ನೋಡನೋಡುತ್ತಲೇ 2025ರ ಕೊನೆಯ ತಿಂಗಳಿಗೆ ಬಂದಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ನಮ್ಮನ್ನು ಸ್ವಾಗತಿಸುತ್ತದೆ. ಹಾಗಾಗಿ, ಜಿಮ್ ಗೆ ಹೋಗಬೇಕು, ಫಾಸ್ಟ್ ಫುಡ್ ತಿನ್ನಬಾರದು, ನಿತ್ಯ ವಾಕಿಂಗ್ ಮಾಡಬೇಕು ಸೇರಿ ಹಲವು Resolutions ಪಟ್ಟಿ ತಯಾರಾಗುತ್ತಿದೆ. ಇವುಗಳ ಜತೆಗೆ 2026ರಲ್ಲಿ ಹಣ ಉಳಿತಾಯದ ದೃಷ್ಟಿಯಿಂದಲೂ ಒಂದಷ್ಟು ನಿರ್ಣಯಗಳನ್ನು ತೆಗೆದುಕೊಂಡರೆ 2026ರ ಕೊನೆಯಲ್ಲಿ ಇಡೀ ವರ್ಷವನ್ನು ವೇಸ್ಟ್ ಮಾಡಿದೆ ಎಂಬ ಭಾವನೆ ಮೂಡುವುದಿಲ್ಲ. ಹಾಗಾದರೆ, 2026ರಲ್ಲಿ ಹಣ ಉಳಿಸಲು ಏನು ಮಾಡಬೇಕು? ಇಲ್ಲಿವೆ ಸಿಂಪಲ್ ಟಿಪ್ಸ್.
• ಲೆಕ್ಕ ಬಿಟ್ಟವನು ಲೋಕ ಬಿಟ್ಟ ಎಂಬ ಮಾತಿದೆ. ಈ ಲೆಕ್ಕವನ್ನೇ ಇಂಗ್ಲಿಷ್ ನಲ್ಲಿ ಬಜೆಟಿಂಗ್ ಎನ್ನುತ್ತಾರೆ. ನೀವು ಪ್ರತಿ ತಿಂಗಳು ಮಾಡುವ ಖರ್ಚಿನ ಲೆಕ್ಕ ಇರಿಸಿ. ಹಾಗೆಯೇ, ಎಲ್ಲಿ ದುಂದು ವೆಚ್ಚ ಆಗುತ್ತಿದೆ ಎಂಬುದನ್ನು ಬರೆದಿಡಿ. ಆಗ ಹಣ ಉಳಿಸಲು ಸಾಧ್ಯವಾಗುತ್ತದೆ.
• ಸಂಬಳದ ಬಂದ ಕೂಡಲೇ ಮೊದಲು ಖರ್ಚು ಮಾಡದಿರಿ. ಮೊದಲು ಇಂತಿಷ್ಟು ಹಣವನ್ನು ಉಳಿಸಬೇಕು. ಅದರ ನಂತರ ಉಳಿದ ಹಣವನ್ನು ಇಡೀ ತಿಂಗಳು ಖರ್ಚು ಮಾಡಬೇಕು. ಆಗ ಉಳಿತಾಯದ ಜತೆಗೆ ಖರ್ಚಿನ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ.
• ಉಳಿತಾಯ ಮಾಡಿದ ಹಣವನ್ನು ಹಾಗೆಯೇ ಬಿಟ್ಟರೆ ಯಾವುದೇ ಲಾಭವಿಲ್ಲ. ಅದರ ಬದಲು ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆ ಮಾಡಿ. ಇದರಲ್ಲಿ ರಿಸ್ಕ್ ಇದೆ ಎಂದರೆ, ಪೋಸ್ಟ್ ಆಫೀಸ್ ಆರ್ ಡಿಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.
• ಫಾಸ್ಟ್ ಫುಡ್ ತಿನ್ನುವುದು, ವಾರಕ್ಕೊಮ್ಮೆ ಪಾರ್ಟಿ ಮಾಡುವುದು, ದುರಭ್ಯಾಸಗಳು ಇದ್ದರೆ ನಿಯಮಿತವಾಗಿ ಕಡಿಮೆ ಮಾಡಿ ಇಲ್ಲವೇ ಬಿಟ್ಟುಬಿಡಿ. ನೆನಪಿರಲಿ, ಸಣ್ಣ ಸಣ್ಣ ರಂಧ್ರಗಳೇ ಹಡಗನ್ನು ಮುಳುಗಿಸುತ್ತವೆ. ಸಣ್ಣಪುಟ್ಟ ದುಂದುವೆಚ್ಚಗಳು ಮೊದಲು ನಿಯಂತ್ರಣಕ್ಕೆ ಬರಲಿ. ಆರೋಗ್ಯವೂ ಉಳಿಯುತ್ತದೆ, ಹಣವೂ ಉಳಿಯುತ್ತದೆ.
• ಇದೇನಿದ್ದರೂ ಸೈಬರ್ ವಂಚನೆಯ ಕಾಲ. ಕಷ್ಟಪಟ್ಟು ದುಡಿದ ಹಣವನ್ನು ವಂಚಕರು ಲಪಟಾಯಿಸುತ್ತಾರೆ. ಹಾಗಾಗಿ, ಯಾರಿಗೂ ಒಟಿಪಿ, ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ಮಾಹಿತಿ ನೀಡದಿರಿ. ಡಿಜಿಟಲ್ ಅರೆಸ್ಟ್ ಬಗ್ಗೆಯೂ ಎಚ್ಚರಿಕೆಯಿಂದ ಇರಿ.
• ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹಣ ಡಬಲ್ ಮಾಡಿಕೊಡುತ್ತೇವೆ ಎಂದು ವಂಚಿಸುವವರು ಇದ್ದಾರೆ. ದಿಢೀರನೆ ದುಡ್ಡು ಮಾಡುವ ಇಂತಹ ಜಾಲಗಳಿಗೆ ಸಿಲುಕಿ ಹಣ ಕಳೆದುಕೊಳ್ಳದಿರಿ.
ಇದನ್ನೂ ಓದಿ: ಮಾನಸಿಕ ಆರೋಗ್ಯ ಪ್ರಾಧಿಕಾರದಲ್ಲಿ ಕನ್ಸಲ್ಟಂಟ್ ಹುದ್ದೆಗಳ ನೇಮಕ : 80 ಸಾವಿರ ರೂ. ಸಂಬಳ



















