ಬೆಂಗಳೂರು: ಅರ್ಜೆಂಟಾಗಿ ಆಫೀಸಿಗೆ ಹೋಗಬೇಕು. ಅದಕ್ಕಾಗಿ ಬೇಗನೆ ಮೆಟ್ರೋ ಹತ್ತಬೇಕು. ಆದರೆ, ಮೆಟ್ರೋ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಗಾಗಿ ದೊಡ್ಡ ಸಾಲು ಇರುತ್ತದೆ. ಪಾಸ್ ಮಾಡಿಸಿಕೊಂಡರೂ ಅದಕ್ಕೆ ರಿಚಾರ್ಜ್ ಮಾಡಲು ಕ್ಯೂನಲ್ಲಿ ನಿಲ್ಲಬೇಕು. ಆದರೆ, ಇನ್ನುಮುಂದೆ ಮೆಟ್ರೋ ಟಿಕೆಟ್ ಗಾಗಿ ಕ್ಯೂನಲ್ಲಿ ನಿಲ್ಲುವ ತಲೆನೋವು ಇರುವುದಿಲ್ಲ. ಹೌದು, ಉಬರ್ ಆ್ಯಪ್ ಮೂಲಕವೇ ಇನ್ನುಮುಂದೆ ಮೆಟ್ರೋ ಟಿಕೆಟ್ ಖರೀದಿಸಬಹುದಾಗಿದೆ.
ಹೌದು, ಮೆಟ್ರೋ ಪ್ರಯಾಣಿಕರು ಈಗ ಉಬರ್ ಆ್ಯಪ್ ಮೂಲಕವೇ ನಮ್ಮ ಮೆಟ್ರೋ ಟಿಕೆಟ್ ಗಳನ್ನು ಖರೀದಿಸಬಹುದಾಗಿದೆ. ಯುಪಿಐ ಮೂಲಕ ಹಣ ಪಾವತಿಸಿದರೆ, ನಿಮಗೊಂದು ಕ್ಯೂಆರ್ ಕೋಡ್ ಲಭ್ಯವಾಗುತ್ತದೆ. ಆ ಕ್ಯೂಆರ್ ಕೋಡ್ ಮೂಲಕವೇ ಪ್ರಯಾಣಿಕರು ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಬಹುದಾಗಿದೆ. ಹಾಗೆಯೇ, ಮೆಟ್ರೋ ರೈಲುಗಳ ಸಂಚಾರದ ಸಮಯದ ಕುರಿತು ಕೂಡ ಆ್ಯಪ್ ನಲ್ಲಿ ನಿಖರ ಮಾಹಿತಿ ದೊರೆಯಲಿದೆ.
ಉಬರ್ ಆ್ಯಪ್ ಮೂಲಕವೇ ಟಿಕೆಟ್ ನೀಡಲು ಉಬರ್ ಸಂಸ್ಥೆಯು ಬಿಎಂಆರ್ ಸಿಎಲ್ ಹಾಗೂ ಒಎನ್ ಡಿಸಿ ಜತೆ ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ, ದಿಲ್ಲಿ, ಮುಂಬೈ ಸೇರಿ ಹಲವು ನಗರಗಳಲ್ಲಿ ಉಬರ್ ಆ್ಯಪ್ ಮೂಲಕ ಮೆಟ್ರೋ ಟಿಕೆಟ್ ಬುಕ್ ಮಾಡುವ ಸೌಲಭ್ಯ ಇದೆ. ಈಗ ಇದನ್ನು ಬೆಂಗಳೂರಿನಲ್ಲೂ ಜಾರಿಗೆ ತರಲಾಗಿದೆ ಎಂದು ಉಬರ್ ಸಂಸ್ಥೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಟ್ಯಾಕ್ಸಿ ಸೇವೆ ನೀಡುತ್ತಿರುವ ಉಬರ್ ಸಂಸ್ಥೆಯು ಈಗ ಬೆಂಗಳೂರಿನಲ್ಲಿ ಉಬರ್ ಬಸ್ ಸೇವೆ ಆರಂಭಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಅನುಮತಿ ಪಡೆಯಲು ಪ್ರಸ್ತಾಪವನ್ನೂ ಸಲ್ಲಿಸಿದೆ. ರಾಜ್ಯ ಸರ್ಕಾರ ಅನುಮತಿ ನೀಡಿದರೆ ಉಬರ್ ಬಸ್ ಸೇವೆ ಆರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: ಭಾರಿ ದಂಡ ತಪ್ಪಿಸಿಕೊಳ್ಳಬೇಕು ಎಂದರೆ ಡಿಸೆಂಬರ್ 31ರೊಳಗೆ ಈ ಕೆಲಸಗಳನ್ನು ಮಾಡಿ ಮುಗಿಸಿ



















