ಲಕ್ನೋ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ದುರ್ಬಳಕೆ ಮಾಡಿಕೊಂಡು, ಪ್ರಯಾಣಿಕರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆಘಾತಕಾರಿ ಹಗರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಎಕ್ಸ್‌ಪ್ರೆಸ್‌ವೇ ನಿರ್ವಹಣಾ ಸಂಸ್ಥೆಯ ಮೂವರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಅಧಿಕಾರಿ ಪರಾರಿಯಾಗಿದ್ದಾನೆ.
ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯ ಸುರಕ್ಷತಾ ವ್ಯವಸ್ಥೆಯನ್ನೇ (Anti-Traffic Management System – ATMS) ಬಳಸಿಕೊಂಡು ಈ ದಂಧೆ ನಡೆಸಲಾಗುತ್ತಿತ್ತು. ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸುವ ದಂಪತಿಗಳು ಮತ್ತು ನವವಿವಾಹಿತರ ಖಾಸಗಿ ಕ್ಷಣಗಳನ್ನು ಕಂಟ್ರೋಲ್ ರೂಮ್‌ನಲ್ಲಿದ್ದ ಸಿಬ್ಬಂದಿ ಜೂಮ್ ಮಾಡಿ ರೆಕಾರ್ಡ್ ಮಾಡುತ್ತಿದ್ದರು. ಬಳಿಕ ಆ ವಾಹನಗಳನ್ನು ಹಿಂಬಾಲಿಸಿ, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಹಣ ಪಡೆದ ಮೇಲೂ ಕೆಲವು ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಹರಿಬಿಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಅಧಿಕಾರಿಗಳ ವಜಾ, ಮೂವರ ಸೆರೆ
ವಿಡಿಯೋಗಳು ವೈರಲ್ ಆದ ನಂತರ ಮುಖ್ಯಮಂತ್ರಿ ಕಚೇರಿಗೆ ದೂರು ತಲುಪಿದ್ದು, ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಎಕ್ಸ್‌ಪ್ರೆಸ್‌ವೇ ನಿರ್ವಹಣಾ ಜವಾಬ್ದಾರಿ ಹೊತ್ತಿದ್ದ ಎಸ್‌ಸಿಐಪಿಎಲ್ ಸೂಪರ್‌ವೇವ್ ಕಮ್ಯುನಿಕೇಷನ್ ಕಂಪನಿಯು ಸಹಾಯಕ ವ್ಯವಸ್ಥಾಪಕ ಆಶುತೋಷ್ ಸರ್ಕಾರ್, ಟ್ರಾಫಿಕ್ ಮ್ಯಾನೇಜರ್ ಶಶಾಂಕ್ ಶೇಖರ್ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಈ ಪೈಕಿ ಆಶುತೋಷ್ ಸರ್ಕಾರ್, ಟೆಕ್ನಿಷಿಯನ್ ಅಭಿಷೇಕ್ ತಿವಾರಿ ಮತ್ತು ಸಿಸ್ಟಮ್ ಎಂಜಿನಿಯರ್ ಪ್ರಮೋದ್ ಪಟೇಲ್ ಅವರನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಟ್ರಾಫಿಕ್ ಮ್ಯಾನೇಜರ್ ಶಶಾಂಕ್ ಶೇಖರ್‌ಗಾಗಿ ಶೋಧ ಮುಂದುವರಿದಿದೆ.
ಸಾವಿರಾರು ವಿಡಿಯೋಗಳ ಸಂಗ್ರಹ?
ಪೊಲೀಸ್ ವಿಚಾರಣೆ ವೇಳೆ ಆರೋಪಿ ಆಶುತೋಷ್ ಸರ್ಕಾರ್ ಸ್ಫೋಟಕ ಮಾಹಿತಿಯೊಂದನ್ನು ಬಾಯ್ಬಿಟ್ಟಿದ್ದಾನೆ. ಕಳೆದ ಎರಡೂವರೆ ವರ್ಷಗಳಲ್ಲಿ ಇದೇ ರೀತಿ ಸಾವಿರಾರು ಬಾರಿ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿತ್ತು ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ರಸ್ತೆ ಬದಿಯ ಹೊಲಗಳಲ್ಲಿ ಮಹಿಳೆಯರನ್ನು ಕೂಡ ಚಿತ್ರೀಕರಿಸಲಾಗಿದೆ ಎಂಬ ಆರೋಪಗಳಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ರಸ್ತೆ ಸುರಕ್ಷತೆಗಾಗಿ ಅಳವಡಿಸಲಾದ ಅತ್ಯಾಧುನಿಕ ಸ್ಮಾರ್ಟ್ ಕ್ಯಾಮೆರಾಗಳೇ ಈಗ ಸುಲಿಗೆಯ ಅಸ್ತ್ರಗಳಾಗಿ ಮಾರ್ಪಟ್ಟಿದ್ದು, ದತ್ತಾಂಶ ಸುರಕ್ಷತೆ ಮತ್ತು ಕಣ್ಗಾವಲು ವ್ಯವಸ್ಥೆಯ ಮೇಲ್ವಿಚಾರಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರು ಸದ್ಯ ಸಿಸಿಟಿವಿ ಲಾಗ್‌ಗಳು ಮತ್ತು ಬ್ಯಾಕಪ್‌ಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: 10 ಸಾವಿರ ಅಲ್ಲ, 1 ಲಕ್ಷ ಕೊಟ್ಟರೂ ಮುಸ್ಲಿಮರು ನನಗೆ ವೋಟ್ ಹಾಕಲ್ಲ : ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ



















