ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ತನ್ನ ತಂದೆಯೇ ಕೈಕಾಲು ಕಟ್ಟಿ ಕಾಲುವೆಗೆ ತಳ್ಳಿದ್ದ 17 ವರ್ಷದ ಬಾಲಕಿಯೊಬ್ಬಳು, ಘಟನೆ ನಡೆದ ಎರಡು ತಿಂಗಳ ನಂತರ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾಳೆ. ಅಷ್ಟೇ ಅಲ್ಲದೆ, ತನ್ನನ್ನು ಕೊಲ್ಲಲು ಯತ್ನಿಸಿದ ತಂದೆಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆಕೆ ಪೊಲೀಸರ ಮುಂದೆ ಕಣ್ಣೀರು ಹಾಕುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾಳೆ.
ಏನಿದು ಘಟನೆ?
ಕಳೆದ ಸೆಪ್ಟೆಂಬರ್ 29ರಂದು ಈ ಆಘಾತಕಾರಿ ಘಟನೆ ನಡೆದಿತ್ತು. ಬಾಲಕಿಯ ತಂದೆ ಸುರ್ಜಿತ್ ಸಿಂಗ್, ಮಗಳ ನಡತೆಯ ಬಗ್ಗೆ ಅನುಮಾನಗೊಂಡು ಆಕೆಯ ಕೈಗಳನ್ನು ಹಗ್ಗದಿಂದ ಕಟ್ಟಿ ನಿರ್ದಯವಾಗಿ ಕಾಲುವೆಗೆ ತಳ್ಳಿದ್ದನು. ತಾಯಿ ಮತ್ತು ಮೂವರು ಕಿರಿಯ ಸಹೋದರಿಯರ ಎದುರೇ ಈ ಕೃತ್ಯ ನಡೆದಿತ್ತು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಾಲಕಿಯ ಸಂಬಂಧಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ತಂದೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಅಂದಿನಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಸಾವನ್ನೇ ಗೆದ್ದು ಬಂದ ಬಾಲಕಿ
ಭಾನುವಾರ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾದ ಬಾಲಕಿ, ತಾನು ಸಾವಿನ ದವಡೆಯಿಂದ ಪಾರಾದ ರೋಚಕ ಕಥೆಯನ್ನು ವಿವರಿಸಿದ್ದಾಳೆ. “ನೀರಿನ ರಭಸಕ್ಕೆ ಕೈಗೆ ಕಟ್ಟಿದ್ದ ಹಗ್ಗಗಳು ತಾನಾಗಿಯೇ ಸಡಿಲಗೊಂಡವು. ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವಾಗ ನೀರಿನಲ್ಲಿದ್ದ ಕಬ್ಬಿಣದ ಸರಳೊಂದು ತಲೆಗೆ ಬಡಿದು ನೋವಾಯಿತು. ಆದರೆ ಅದೇ ಸರಳನ್ನು ಗಟ್ಟಿಯಾಗಿ ಹಿಡಿದುಕೊಂಡು ದಡ ಸೇರಲು ಸಾಧ್ಯವಾಯಿತು,” ಎಂದು ಆಕೆ ಹೇಳಿದ್ದಾಳೆ. ನಂತರ ದಾರಿಯಲ್ಲಿ ಹೋಗುತ್ತಿದ್ದ ಮೂವರು ಆಕೆಯನ್ನು ರಕ್ಷಿಸಿದ್ದಾರೆ. ಕಳೆದ ಎರಡು ತಿಂಗಳು ತಾನು ಅನಾರೋಗ್ಯದಿಂದ ಬಳಲುತ್ತಿದ್ದೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದೆ ಎಂದು ಆಕೆ ತಿಳಿಸಿದ್ದಾಳೆ.
ತಂದೆಯ ಬಿಡುಗಡೆಗೆ ಆಗ್ರಹವೇಕೆ?
ತಂದೆ ತನ್ನನ್ನು ಕೊಲ್ಲಲು ನೋಡಿದರೂ, ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬಾಲಕಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾಳೆ. ಇದಕ್ಕೆ ಕಾರಣವನ್ನೂ ನೀಡಿರುವ ಆಕೆ, “ನನ್ನ ತಂದೆ ಜೈಲಿನಲ್ಲಿದ್ದರೆ ನನ್ನ ಮೂವರು ಕಿರಿಯ ಸಹೋದರಿಯರನ್ನು ನೋಡಿಕೊಳ್ಳುವವರು ಯಾರೂ ಇಲ್ಲ,” ಎಂದು ಅಳಲು ತೋಡಿಕೊಂಡಿದ್ದಾಳೆ.
ಘಟನೆಯ ದಿನ ತಂದೆ ಮದ್ಯದ ಅಮಲಿನಲ್ಲಿದ್ದರು ಮತ್ತು ತಾಯಿಯೇ ತಂದೆಯನ್ನು ಪ್ರಚೋದಿಸಿ ತನ್ನ ಮೇಲೆ ಹಲ್ಲೆ ಮಾಡಿಸಿದ್ದರು ಎಂದು ಆಕೆ ಗಂಭೀರ ಆರೋಪ ಮಾಡಿದ್ದಾಳೆ. ನನಗೆ ನನ್ನ ಸಂಬಂಧಿಕರ ಮೇಲೆ ನಂಬಿಕೆ ಇಲ್ಲದ ಕಾರಣ ಪೊಲೀಸ್ ರಕ್ಷಣೆ ಬೇಕು ಎಂದೂ ಆಕೆ ಕೋರಿದ್ದಾಳೆ.
ಬಾಲಕಿ ಬದುಕಿ ಬಂದಿರುವುದರಿಂದ ಮತ್ತು ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಈಗ ತಂದೆಯ ಮೇಲಿದ್ದ ಕೊಲೆ ಆರೋಪವನ್ನು ‘ಕೊಲೆ ಯತ್ನ’ ಎಂದು ಬದಲಾಯಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ನಟಿ ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣ : ಮಲಯಾಳಂ ಖ್ಯಾತ ನಟ ದಿಲೀಪ್ ಖುಲಾಸೆ



















