ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಪ್ರತಿಷ್ಠಿತ ಚುನಾವಣೆಯಲ್ಲಿ ಟೀಮ್ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಭರ್ಜರಿ ಜಯ ಸಾಧಿಸುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಜಿದ್ದಾಜಿದ್ದಿನ ಚುನಾವಣಾ ಕಣದಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ ಕೆ.ಎನ್. ಶಾಂತಕುಮಾರ್ ಅವರನ್ನು ಸೋಲಿಸಿ, ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 1,307 ಸದಸ್ಯರು ಮತದಾನದ ಹಕ್ಕನ್ನು ಚಲಾಯಿಸಿದ್ದು, ಇದರಲ್ಲಿ ವೆಂಕಟೇಶ್ ಪ್ರಸಾದ್ ಅವರು 749 ಮತಗಳನ್ನು ಪಡೆದು ಪ್ರಾಬಲ್ಯ ಮೆರೆದರೆ, ಎದುರಾಳಿ ಶಾಂತಕುಮಾರ್ ಅವರು 558 ಮತಗಳಿಗೆ ತೃಪ್ತಿಪಟ್ಟು ಸೋಲೊಪ್ಪಿಕೊಂಡರು.
ಕೇವಲ ಅಧ್ಯಕ್ಷ ಸ್ಥಾನವಷ್ಟೇ ಅಲ್ಲದೆ, ಪ್ರಮುಖ ಆಡಳಿತ ಮಂಡಳಿಯ ಸ್ಥಾನಗಳಲ್ಲೂ ವೆಂಕಟೇಶ್ ಪ್ರಸಾದ್ ಅವರ ಬಣವೇ ಮೇಲುಗೈ ಸಾಧಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಅವರು ತಮ್ಮ ಪ್ರತಿಸ್ಪರ್ಧಿ ಡಿ. ವಿನೋದ್ ಶಿವಪ್ಪ ಅವರನ್ನು 719-588 ಮತಗಳ ಅಂತರದಿಂದ ಮಣಿಸಿದರು. ವಿಶೇಷವೆಂದರೆ, ಸುಜಿತ್ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೇ ಬಿಸಿಸಿಐನ ‘ಸೆಂಟರ್ ಆಫ್ ಎಕ್ಸಲೆನ್ಸ್’ನ ಶಿಕ್ಷಣ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗೆಯೇ, ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಸಂತೋಷ್ ಮೆನನ್ ಅವರು ಇ.ಎಸ್. ಜಯರಾಮ್ ಅವರನ್ನು ಸೋಲಿಸಿ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ, ಖಜಾಂಚಿ ಸ್ಥಾನಕ್ಕೆ ಬಿ.ಎನ್. ಮಧುಕರ್ ಅವರು ಎಂ.ಎಸ್. ವಿನಯ್ ಅವರನ್ನು ಮಣಿಸಿ ಆಯ್ಕೆಯಾದರು. ಈ ಮೂಲಕ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರ ಬೆಂಬಲಿತ ಬಣವು ಸಂಸ್ಥೆಯ ನಾಲ್ಕು ಪ್ರಮುಖ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ವೆಂಕಟೇಶ್ ಪ್ರಸಾದ್ ಅನುಭವ
ಬೆಂಗಳೂರು ವಲಯದಿಂದಲೂ ವೆಂಕಟೇಶ್ ಪ್ರಸಾದ್ ಬಣದ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದಾರೆ. ಮಾಜಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಕಲ್ಪನಾ ವೆಂಕಟಾಚಾರ್ ಅವರು 764 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದರೆ, ಕರ್ನಾಟಕದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಅವಿನಾಶ್ ವೈದ್ಯ ಮತ್ತು ಆಶಿಶ್ ಅಮರ್‌ಲಾಲ್ ಕೂಡ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿರುವ ವೆಂಕಟೇಶ್ ಪ್ರಸಾದ್, ಟೀಮ್ ಇಂಡಿಯಾದ ಪರ 33 ಟೆಸ್ಟ್ ಮತ್ತು 196 ಏಕದಿನ ಪಂದ್ಯಗಳನ್ನು ಆಡಿರುವ ಅನುಭವದೊಂದಿಗೆ ಈಗ ಆಡಳಿತಾತ್ಮಕವಾಗಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ವೆಂಕಟೇಶ್ ಪ್ರಸಾದ್ ಅವರಿಗೆ ಮುಂದಿನ ಹಾದಿ ಸುಗಮವಾಗಿಲ್ಲ. ಇತ್ತೀಚೆಗೆ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಟ್ರೋಫಿ ಗೆದ್ದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ನೂಕುನುಗ್ಗಲಿನಲ್ಲಿ 11 ಜನರು ಮೃತಪಟ್ಟ ಘಟನೆಯು ಕ್ರೀಡಾಂಗಣದ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈ ದುರಂತದ ಪರಿಣಾಮವಾಗಿ, 2026ರ ಟಿ20 ವಿಶ್ವಕಪ್ ಆತಿಥ್ಯದ ಪಟ್ಟಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಕೈಬಿಡಲಾಗಿದೆ ಮತ್ತು ಐಪಿಎಲ್ ಪಂದ್ಯಗಳ ಆಯೋಜನೆಯ ಕುರಿತೂ ಅನಿಶ್ಚಿತತೆ ಮೂಡಿದೆ. ಹೀಗಾಗಿ, ಕ್ರೀಡಾಂಗಣದ ಸುರಕ್ಷತೆಯನ್ನು ಖಚಿತಪಡಿಸಿ, ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಮತ್ತೆ ಬೆಂಗಳೂರಿಗೆ ತರುವ ಮೂಲಕ ಸಂಸ್ಥೆಯ ಗತವೈಭವವನ್ನು ಮರುಸ್ಥಾಪಿಸುವುದು ವೆಂಕಟೇಶ್ ಪ್ರಸಾದ್ ಅವರ ಮುಂದಿರುವ ಅತಿದೊಡ್ಡ ಸವಾಲಾಗಿದೆ.
ಇದನ್ನೂ ಓದಿ: ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ | ತಂದೆ – ತಾಯಿಯೊಂದಿಗೆ ತೆಗೆದ ಫೋಟೋ ಹಂಚಿಕೊಂಡ ಸಾನ್ವಿ ಸುದೀಪ್



















