ರಾಯ್ಪುರ: ಕ್ರಿಕೆಟ್ ಮೈದಾನದಲ್ಲಿ ಆಟದ ರೋಚಕತೆಯಷ್ಟೇ ಅಲ್ಲಿ ನಡೆಯುವ ಸ್ವಾರಸ್ಯಕರ ಮಾತುಕತೆಗಳೂ ಆಗಾಗ ಅಭಿಮಾನಿಗಳ ಗಮನ ಸೆಳೆಯುತ್ತವೆ. ಬುಧವಾರ ರಾಯ್ಪುರದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಅಂತಹದ್ದೇ ಒಂದು ಅಪರೂಪದ ಹಾಗೂ ಕನ್ನಡಿಗರಿಗೆ ಹೆಮ್ಮೆ ತರುವ ಘಟನೆ ನಡೆದಿದೆ. ಟೀಂ ಇಂಡಿಯಾದ ಹಂಗಾಮಿ ನಾಯಕ ಹಾಗೂ ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಅವರು, ಪಂದ್ಯದ ಒತ್ತಡದ ನಡುವೆಯೂ ತಮ್ಮದೇ ರಾಜ್ಯದ ಯುವ ವೇಗಿ ಪ್ರಸಿಧ್ ಕೃಷ್ಣ ಅವರಿಗೆ ಅಪ್ಪಟ ಕನ್ನಡದಲ್ಲೇ ತರಾಟೆಗೆ ತೆಗೆದುಕೊಂಡು, ಬೌಲಿಂಗ್ ಸಲಹೆ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ದಕ್ಷಿಣ ಆಫ್ರಿಕಾ ತಂಡವು ಭಾರತ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟುವ ಭರಾಟೆಯಲ್ಲಿತ್ತು. ಹರಿಣ ಪಡೆಯ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿದ್ದರು. ಈ ವೇಳೆ ಬೌಲಿಂಗ್‌ಗೆ ಇಳಿದಿದ್ದ ಕನ್ನಡಿಗ ಪ್ರಸಿಧ್ ಕೃಷ್ಣ ತುಸು ಲಯ ಕಳೆದುಕೊಂಡಂತೆ ಕಂಡುಬಂದರು. ಎದುರಾಳಿ ಬ್ಯಾಟರ್‌ಗಳು ಪ್ರಸಿಧ್ ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈಯುತ್ತಿದ್ದರು. ಬೌಲರ್ ಒತ್ತಡಕ್ಕೆ ಒಳಗಾಗುವುದನ್ನು ಗಮನಿಸಿದ ನಾಯಕ ಕೆ.ಎಲ್. ರಾಹುಲ್, ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಜಾಗದಿಂದಲೇ ಪ್ರಸಿಧ್ ಕೃಷ್ಣ ಅವರ ನೆರವಿಗೆ ಧಾವಿಸಿದರು. ಎದುರಾಳಿ ಬ್ಯಾಟರ್‌ಗಳಿಗೆ ತಂತ್ರ ಅರ್ಥವಾಗಬಾರದು ಎಂಬ ಕಾರಣಕ್ಕೋ ಅಥವಾ ತವರಿನ ಭಾಷೆಯ ಆಪ್ತತೆಗಾಗಿಯೋ ರಾಹುಲ್ ಕನ್ನಡದಲ್ಲೇ ಮಾತನಾಡಲು ಆರಂಭಿಸಿದರು.
ಸ್ಟಂಪ್ ಮೈಕ್‌ನಲ್ಲಿ ಸೆರೆಯಾದ ಆ ಮಾತುಗಳು
ಮೊದಲು ಫೀಲ್ಡಿಂಗ್ ಹೊಂದಾಣಿಕೆ ಮಾಡುವಾಗ “ಬಾ.. ಬಾ.. ಬೇಗ ಬಾ..” ಎಂದು ಕರೆದ ರಾಹುಲ್, ನಂತರ ಪ್ರಸಿಧ್ ಕೃಷ್ಣ ಅವರಿಗೆ ಖಡಕ್ ಎಚ್ಚರಿಕೆ ಮತ್ತು ಸಲಹೆಯನ್ನು ನೀಡಿದರು. “ಪ್ರಸಿಧ್, ನೀನು ತಲೆ ಓಡಿಸಬೇಡ, ನಾನ್ ಹೇಳಿದ್ ಹಾಕು. ಹೇಳಿದೀನಿ ಏನ್ ಹಾಕಬೇಕು ಅಂತ; ಅದನ್ನೇ ಹಾಕು,” ಎಂದು ರಾಹುಲ್ ತಾಕೀತು ಮಾಡಿದರು. ನಾಯಕನ ಮಾತಿಗೆ ಪ್ರತಿಕ್ರಿಯಿಸಿದ ಪ್ರಸಿಧ್, “ತಲೆಗೆ ಹಾಕ್ಲಾ?” (ಬೌನ್ಸರ್ ಎಸೆಯಲೇ?) ಎಂದು ಮರುಪ್ರಶ್ನೆ ಹಾಕಿದರು. ಆಗ ತಕ್ಷಣವೇ ಎಚ್ಚರಿಸಿದ ರಾಹುಲ್, “ತಲೆಗೆ ಎಲ್ಲಾ ಬೇಡ ಈಗ. ಹೇಳಿ ಬಂದಿದ್ದೀನಿ ತಲೆಗೆ ಹಾಕಬೇಡ ಅಂತ ಮಗಾ,” ಎಂದು ಕಿವಿಮಾತು ಹೇಳಿದರು. ಮೈದಾನದ ಗದ್ದಲದ ನಡುವೆಯೂ ಈ ಸ್ಪಷ್ಟ ಕನ್ನಡದ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದ್ದು, ಕನ್ನಡಿಗ ಕ್ರಿಕೆಟ್ ಪ್ರೇಮಿಗಳಿಗೆ ಸಂತಸ ತಂದಿದೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಕಾಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಕೂಡ ಈ ಬಗ್ಗೆ ಪ್ರಸ್ತಾಪಿಸಿ, ರಾಹುಲ್ ತಮ್ಮ ಬೌಲರ್‌ಗೆ ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಮರುಕಳಿಸಿದ ಹಳೆಯ ನೆನಪುಗಳು
ಭಾರತ ತಂಡದಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಕನ್ನಡಿಗರು ಆಡುವಾಗ ಮೈದಾನದಲ್ಲಿ ಕನ್ನಡದ ಕಂಪು ಪಸರಿಸುವುದು ಇದೇ ಮೊದಲೇನಲ್ಲ. ಹಿಂದೆ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ ಮತ್ತು ಮನೀಷ್ ಪಾಂಡೆ ಅವರಂತಹ ದಿಗ್ಗಜರು ಒಟ್ಟಿಗೆ ಆಡುವಾಗಲೂ ಮೈದಾನದಲ್ಲಿ ರಣತಂತ್ರ ರೂಪಿಸಲು ಕನ್ನಡವನ್ನೇ ಬಳಸುತ್ತಿದ್ದರು. ಈಗ ರಾಹುಲ್ ಮತ್ತು ಪ್ರಸಿಧ್ ಕೃಷ್ಣ ಆ ಪರಂಪರೆಯನ್ನು ಮುಂದುವರಿಸಿದ್ದಾರೆ.
ಬ್ಯಾಟಿಂಗ್‌ನಲ್ಲಿ ಮಿಂಚಿದ ರಾಹುಲ್, ಬೌಲಿಂಗ್‌ನಲ್ಲಿ ಎಡವಿದ ಪ್ರಸಿಧ್
ಪಂದ್ಯದಲ್ಲಿ ನಾಯಕ ರಾಹುಲ್ ಬ್ಯಾಟಿಂಗ್‌ನಲ್ಲೂ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಅವರ ಅಮೋಘ ಶತಕಗಳ ನಂತರ ಕಣಕ್ಕಿಳಿದ ರಾಹುಲ್, ಕೇವಲ 43 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಗಳ ಸಹಿತ ಅಜೇಯ 66 ರನ್ ಸಿಡಿಸಿದರು. ಇವರ ಅಬ್ಬರದಿಂದ ಭಾರತ 50 ಓವರ್‌ಗಳಲ್ಲಿ 358 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆದರೆ, ಬೌಲಿಂಗ್‌ನಲ್ಲಿ ಪ್ರಸಿಧ್ ಕೃಷ್ಣ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲರಾದರು. ಅವರು ಎಸೆದ 8.2 ಓವರ್‌ಗಳಲ್ಲಿ ಬರೋಬ್ಬರಿ 85 ರನ್ ಬಿಟ್ಟುಕೊಟ್ಟರು. ಅಂತಿಮವಾಗಿ ಏಡನ್ ಮಾರ್ಕ್ರಮ್ ಅವರ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ರೋಚಕ ಜಯ ಸಾಧಿಸಿ, ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿಕೊಂಡಿತು.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ : ವಾಸೀಂ ಅಕ್ರಂ ದಾಖಲೆ ಪುಡಿಗಟ್ಟಿದ ಮಿಚೆಲ್ ಸ್ಟಾರ್ಕ್


















