ನವದೆಹಲಿ : ದುಬೈನ ಅಲ್ ಮಕ್ತೌಮ್ ವಾಯುನೆಲೆಯಲ್ಲಿ ನಡೆದ ಏರ್ ಶೋ ವೇಳೆ ಭಾರತದ ತೇಜಸ್ ಯುದ್ಧ ವಿಮಾನ ಪತನವಾಗಿದ್ದು, ದುರಂತದಲ್ಲಿ ಪೈಲಟ್ ಸಾವನ್ನಪ್ಪಿದ್ದಾನೆ. ಈ ಬೆನ್ನಲ್ಲೇ ಭಾರತೀಯ ವಾಯುಪಡೆ ತನಿಖೆಗೆ ಆದೇಶಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಐಎಎಫ್, ಅಪಘಾತದ ಸಮಯದಲ್ಲಿ ಪೈಲಟ್ ಹೊರಬರಲಾಗದೆ ಜೀವ ಕಳೆದುಕೊಂಡಿದ್ದಾರೆ ಎಂದು ಖಚಿತಪಡಿಸಿದೆ. ಭಾರತೀಯ ಭದ್ರತಾ ಪಡೆಗಳು ಈ ದುಃಖದ ಸಮಯದಲ್ಲಿ ಪೈಲಟ್ನ ದುಃಖಿತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತವೆ ಎಂದು ಐಎಎಫ್ ಹೇಳಿದೆ. ಹಾಗೆಯೇ ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ನ್ಯಾಯಾಲಯವನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದೆ.
ಈ ಘಟನೆ ಸ್ಥಳೀಯ ಸಮಯ ಇಂದು ಮಧ್ಯಾಹ್ನ 2.10ಕ್ಕೆ ಸಂಭವಿಸಿದೆ. ದುಬೈ ವರ್ಲ್ಡ್ ಸೆಂಟ್ರಲ್ನಲ್ಲಿರುವ ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಪ್ಪು ಹೊಗೆ ಕಾಣಿಸಿಕೊಂಡಿರುವ ಘಟನೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಮಾರ್ಚ್ 2024ರಲ್ಲಿ ಸಂಭವಿಸಿದ ತೇಜಸ್ ಯುದ್ಧ ವಿಮಾನವನ್ನು ಒಳಗೊಂಡ ಎರಡನೇ ಅಪಘಾತ ಇದಾಗಿದೆ. ಆ ಅಪಘಾತ ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಂಭವಿಸಿತ್ತು. ಆಗ ಪೈಲಟ್ ಸುರಕ್ಷಿತವಾಗಿ ಹೊರಗೆ ಜಿಗಿದಿದ್ದರು. ಈ ಬಾರಿಯ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ರಾಯಚೂರು | ಭಿಕ್ಷುಕನ ಸೋಗಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೋಸ್ಟ್ ವಾಂಟೆಂಡ್ ಕಳ್ಳ ಪೊಲೀಸ್ ಬಲೆಗೆ!


















