ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಇತ್ತೀಚೆಗೆ ಹಲವು ಮಹತ್ವದ ಬದಲಾವಣೆಗಳ ಮೂಲಕ ಸದಸ್ಯರಿಗೆ ಅನುಕೂಲ ಮಾಡಿಕೊಟ್ಟಿದೆ. ಈಗ ಮತ್ತೊಂದು ಸುಧಾರಣೆಯನ್ನು ಇಪಿಎಫ್ಒ ಜಾರಿಗೆ ತಂದಿದೆ. ಉದ್ಯೋಗಿಗಳು ಒಂದು ಕಂಪನಿ ಬಿಟ್ಟು ಮತ್ತೊಂದು ಕಂಪನಿ ಸೇರಿದರೆ ಸ್ವಯಂಚಾಲಿತವಾಗಿಯೇ ಪಿಎಫ್ ಮೊತ್ತವನ್ನು ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಇಪಿಎಫ್ಒ ಜಾರಿಗೆ ತಂದಿದೆ.
ಹೌದು, ಇದಕ್ಕೂ ಮೊದಲು ಖಾಸಗಿ ಕಂಪನಿಗಳ ಉದ್ಯೋಗಿಗಳು ಒಂದು ಕಂಪನಿ ತೊರೆದು, ಮತ್ತೊಂದು ಕಂಪನಿ ಸೇರಿದ ಬಳಿಕ ಹಳೆಯ ಖಾತೆಯ ಪಿಎಫ್ ಮೊತ್ತವನ್ನು ವರ್ಗಾವಣೆ ಮಾಡಿಕೊಳ್ಳಬೇಕಿತ್ತು. ಇದಕ್ಕೆ ಹಳೆಯ ಕಂಪನಿ ಹಾಗೂ ಹೊಸ ಕಂಪನಿಯ ಅನುಮೋದನೆ ಬೇಕಿತ್ತು. ಇದೆಲ್ಲ ಪ್ರಕ್ರಿಯೆ ಮುಗಿಯಲು ಒಂದರಿಂದ ಎರಡು ತಿಂಗಳು ಬೇಕಾಗುತ್ತಿತ್ತು. ಈಗ ಜಾರಿಗೆ ತಂದಿರುವ ಹೊಸ ನಿಯಮವು ಇಪಿಎಫ್ಒ ಸದಸ್ಯರಿಗೆ ಭಾರಿ ಅನುಕೂಲವಾಗಲಿದೆ.
ಹೊಸ ನಿಯಮಗಳ ಪ್ರಕಾರ, ಒಬ್ಬ ಉದ್ಯೋಗಿಯು ಒಂದು ಕಂಪನಿ ಬಿಟ್ಟು ಬೇರೊಂದು ಕಂಪನಿಗೆ ಸೇರಿದ ಕೇವಲ 5 ದಿನಗಳಲ್ಲಿಯೇ ಹಳೆಯ ಖಾತೆಯಿಂದ ಹೊಸ ಖಾತೆಗೆ ಪಿಎಫ್ ಮೊತ್ತವನ್ನು ವರ್ಗಾವನೆ ಮಾಡಲಾಗುತ್ತದೆ. ಇದು ಹೊಸ ಕಂಪನಿಯ ಪಿಎಫ್ ಖಾತೆಯ ಅನ್ವಯ ಸ್ವಯಂಚಾಲಿತವಾಗಿಯೇ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಹೊಸ ವ್ಯವಸ್ಥೆಯ ಜಾರಿಯಿಂದಾಗಿ ಉದ್ಯೋಗಿಗಳಿಗೆ ಕಂಪನಿ ಬದಲಾಯಿಸಿದ ಬಳಿಕ ಪಿಎಫ್ ಮೊತ್ತದ ವರ್ಗಾವಣೆಯ ತಲೆನೋವು, ರಗಳೆ ಇರುವುದಿಲ್ಲ. ಇದರಿಂದಾಗಿ ಇಪಿಎಫ್ಒದ ಸುಮಾರು ಏಳೂವರೆ ಕೋಟಿ ಸದಸ್ಯರಿಗೆ ಅನುಕೂಲವಾಗಲಿದೆ. ಅಲ್ಲದೆ, ಶೀಘ್ರದಲ್ಲೇ ಎಟಿಎಂ ಮೂಲಕವೇ ಪಿಎಫ್ ಮೊತ್ತವನ್ನು ಜಾರಿಗೊಳಿಸುವುದು ಸೇರಿ ಹಲವು ಸೌಲಭ್ಯಗಳುಳ್ಳ ಇಪಿಎಫ್ಒ 3.0 ಜಾರಿಗೂ ಸಿದ್ಧತೆ ನಡೆದಿದೆ.
ಇದನ್ನೂ ಓದಿ : ಬ್ಯಾಂಕ್ ಆಫ್ ಬರೋಡಾದಲ್ಲಿ ಭರ್ಜರಿ 2,700 ಹುದ್ದೆಗಳ ನೇಮಕಾತಿ : ಫ್ರೆಶರ್ ಗಳಿಗೆ ಗುಡ್ ನ್ಯೂಸ್



















