ಲಕ್ನೋ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಐತಿಹಾಸಿಕ ಗೆಲುವಿನತ್ತ ದಾಪುಗಾಲಿಟ್ಟಿದೆ. 243 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಸ್ಥಾನಗಳ ಅವಶ್ಯಕತೆ ಇದ್ದು, ಎನ್‌ಡಿಎ ಈಗಾಗಲೇ 190ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮತ್ತೊಂದೆಡೆ, ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಕೇವಲ 49 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.
ಎನ್‌ಡಿಎ ಪಾಳಯದಲ್ಲಿ ಮುನ್ನಡೆಯ ಸಂಭ್ರಮ
ಬಿಹಾರದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರ ರಚನೆಯಾಗುವುದು ಸ್ಪಷ್ಟವಾಗುತ್ತಿದ್ದಂತೆ, ಮೈತ್ರಿಕೂಟದ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಎನ್‌ಡಿಎ ಮೈತ್ರಿಕೂಟದಲ್ಲಿನ ಬಿಜೆಪಿ 84 ಸ್ಥಾನಗಳಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು 76 ಕ್ಷೇತ್ರಗಳಲ್ಲಿ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 23 ಸ್ಥಾನಗಳಲ್ಲಿ, ಜಿತನ್ ರಾಮ್ ಮಾಂಝಿ ಅವರ ಹಿಂದುಸ್ತಾನಿ ಅವಾಮ್ ಮೋರ್ಚಾ 4 ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ಈ ಫಲಿತಾಂಶವು ಎನ್‌ಡಿಎ ಮೈತ್ರಿಯ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆ
ಚುನಾವಣೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್‌ಗೆ ಮತದಾರರು ಸ್ಪಷ್ಟ ತಿರಸ್ಕಾರ ನೀಡಿದ್ದಾರೆ. ಮೈತ್ರಿಕೂಟದ ಪ್ರಮುಖ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 34 ಸ್ಥಾನಗಳಿಗೆ ಕುಸಿದಿದೆ. ಕಾಂಗ್ರೆಸ್ ಮತ್ತು ಸಿಪಿಐ(ಎಂಎಲ್)(ಎಲ್) ತಲಾ ಆರು ಸ್ಥಾನಗಳಲ್ಲಿ ಹಾಗೂ ಸಿಪಿಎಂ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಅಚ್ಚರಿಯ ವಿಷಯವೆಂದರೆ, ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ತಮ್ಮ ಕುಟುಂಬದ ಭದ್ರಕೋಟೆಯಾದ ರಾಘೋಪುರ ವಿಧಾನಸಭಾ ಕ್ಷೇತ್ರದಲ್ಲೇ ಹಿನ್ನಡೆ ಅನುಭವಿಸಿದ್ದಾರೆ.
ಜನ ಸುರಾಜ್ ಕಥೆ ಏನು?
ಚುನಾವಣಾ ಚಾಣಕ್ಯ ಎಂದೇ ಖ್ಯಾತರಾದ ಪ್ರಶಾಂತ್ ಕಿಶೋರ್ ಅವರ ‘ಜನ್ ಸುರಾಜ್’ ಪಕ್ಷವು ಆರಂಭಿಕ ಹಂತದಲ್ಲಿ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಕುತೂಹಲ ಮೂಡಿಸಿತ್ತಾದರೂ, ನಂತರದ ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿದೆ. ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷ ಎರಡು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು, ಚುನಾವಣೆಗೆ ಮುನ್ನ ಹೊಸ ಪಕ್ಷ ಸ್ಥಾಪಿಸಿದ್ದ ತೇಜಸ್ವಿ ಯಾದವ್ ಅವರ ಸಹೋದರ ತೇಜ್ ಪ್ರತಾಪ್ ಯಾದವ್, 12,000ಕ್ಕೂ ಹೆಚ್ಚು ಮತಗಳ ಅಂತರದಿಂದ ಹಿನ್ನಡೆಯಲ್ಲಿದ್ದಾರೆ. ಮತ್ತೊಂದೆಡೆ, ತಮ್ಮ ಗಾಯನದ ಮೂಲಕ ಖ್ಯಾತರಾಗಿರುವ 25 ವರ್ಷದ ಮೈಥಿಲಿ ಠಾಕೂರ್, ಬಿಜೆಪಿ ಟಿಕೆಟ್‌ನಿಂದ ಅಲಿನಗರ ಕ್ಷೇತ್ರದಲ್ಲಿ ಚೊಚ್ಚಲ ಸ್ಪರ್ಧೆಯಲ್ಲೇ ಮುನ್ನಡೆ ಸಾಧಿಸಿ ಗಮನ ಸೆಳೆದಿದ್ದಾರೆ.
ಬದಲಾದ ರಾಜಕೀಯ ಚಿತ್ರಣ
ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎಗೆ 146 ಸ್ಥಾನಗಳು ಮತ್ತು ಮಹಾಘಟಬಂಧನ್‌ಗೆ 92 ಸ್ಥಾನಗಳು ಲಭಿಸಲಿವೆ ಎಂದು ಭವಿಷ್ಯ ನುಡಿದಿದ್ದವು. ಪ್ರಸ್ತುತ ಫಲಿತಾಂಶವು ಸಮೀಕ್ಷೆಗಳನ್ನೂ ಮೀರಿ ಎನ್‌ಡಿಎ ಪರವಾಗಿ ಹೊರಹೊಮ್ಮಿದೆ. 2020ರ ಚುನಾವಣೆಯಲ್ಲಿ ಆರ್‌ಜೆಡಿ 75 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಿಜೆಪಿ 74 ಸ್ಥಾನಗಳೊಂದಿಗೆ ಮೈತ್ರಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಯ ಫಲಿತಾಂಶವು ಬಿಹಾರದ ರಾಜಕೀಯ ಸಮೀಕರಣವನ್ನು ಮತ್ತಷ್ಟು ಬದಲಿಸಿದೆ. ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, ಶೇ.45ರಷ್ಟು ಮಹಿಳಾ ಮತದಾರರು ಎನ್‌ಡಿಎಯನ್ನು ಬೆಂಬಲಿಸಿದರೆ, ಶೇಕಡ 90ರಷ್ಟು ಯಾದವ ಸಮುದಾಯ ಮತ್ತು ಶೇಕಡ 80ರಷ್ಟು ಮುಸ್ಲಿಂ ಮತದಾರರು ಮಹಾಘಟಬಂಧನ್‌ಗೆ ಮತ ಚಲಾಯಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ರಾಯಚೂರು | ಹತ್ತಿ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ; ಕೋಟ್ಯಂತರ ರೂ. ನಷ್ಟ



















