ಬೆಂಗಳೂರು : ಪ್ರತಿಭೆ ಯಾರಪ್ಪನ ಮನೆ ಸ್ವತ್ತು ಅಲ್ಲ.. ಈ ಮಾತನ್ನೇ ಜೀವನದ ಧ್ಯೇಯ ವಾಕ್ಯವಾಗಿಸಿಕೊಂಡಿರೋ ಪಂಚಮಿ ಈಗ ಕಲಾಕ್ಷೇತ್ರಕ್ಕೆ ಕಾಲಿಟ್ಟು 24 ವರ್ಷ. 9 ತಿಂಗಳಿಗೆ ಕಲಾರಂಗಕ್ಕೆ ಪಾದಾರ್ಪಣೆ ಮಾಡಿದ ದಿಟ್ಟ ಪ್ರತಿಭೆ. ಪಂಚಮಿ ಮಾರೂರಿನ ಶ್ರೀ ಪಾರ್ಶ್ವನಾಥ-ದೀಪಶ್ರೀ ದಂಪತಿಗಳ ಪುತ್ರಿ. ಶ್ರೀ ಯತೀಶ್.ಎಂ ಮಡದಿ.

ಹೌದು.. ಯಕ್ಷಗಾನ, ಭರತನಾಟ್ಯ, ನೃತ್ಯ, ಸಂಗೀತ, ಭಾಷಣ, ಶಿಕ್ಷಣ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿರುವ ಈ ಬಹುಮುಖ ಪ್ರತಿಭೆ, ರಾಜ್ಯಾದ್ಯಂತ 1800ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನ ನೀಡಿದ್ದಾರೆ. ಉದಯ ಟಿವಿಯ ಚಿಣ್ಣರಲೋಕ, ಝೀ ಕನ್ನಡದ ಕುಣಿಯೋಣು ಬಾರಾ, ಸುವರ್ಣಟಿವಿಯ ಪುಟಾಣಿಪಂಟ್ರು ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

ಈಗಾಗಲೇ ಸಾಧನಾಶ್ರೀ, ಬಾಲಪ್ರತಿಭಾಶ್ರೀ, ದ.ಕ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ, ರಾಜ್ಯಮಟ್ಟದ ಜೈನ ಯುವ ಸಾಧನಾಶ್ರೀ, ರಾಜ್ಯಮಟ್ಟದ ಆಳ್ವಾಸ್ ವಿದ್ಯಾರ್ಥಿಸಿರಿ ಪುರಸ್ಕಾರ, ಕಲ್ಕೂರ ಬಾಲಸಿರಿ, ಕರ್ನಾಟಕ ಪ್ರತಿಭಾರತ್ನ, ಚೈತನ್ಯಶ್ರೀ ಪುರಸ್ಕಾರ, ಡಾ|ಕೋಟ ಶಿವರಾಮ ಕಾರಂತ ವಿದ್ಯಾರ್ಥಿ ಗೌರವ, ಕರುನಾಡ ಪದ್ಮಶ್ರೀ ಪುರಸ್ಕಾರ, ಕೀರ್ತಿಸನ್ಮಾನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

2015ರಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ “ರಾಷ್ಟ್ರೀಯ ಅಸಾಧಾರಣ ಪ್ರತಿಭಾ ಪುರಸ್ಕಾರ”ವನ್ನು ದೆಹಲಿಯಲ್ಲಿ ಮಾನ್ಯ ರಾಷ್ಟ್ರಪತಿಗಳಾಗಿದ್ದ ಪ್ರಣವ್ ಮುಖರ್ಜಿಯವರಿಂದ ಮತ್ತು ಕರ್ನಾಟಕ ಸರ್ಕಾರದ “ರಾಜ್ಯ ಅಸಾಧಾರಣ ಪ್ರತಿಭಾ ಪುರಸ್ಕಾರ”ವನ್ನು ರಾಜ್ಯಪಾಲರಾಗಿದ್ದ ಶ್ರೀ ವಜೂಭಾಯಿವಾಲಾರಿಂದ ಏಕಕಾಲಕ್ಕೆ ಪಡೆದ ಹೆಮ್ಮೆ ಈಕೆಯದು.

2016ರಲ್ಲಿ ಕರ್ನಾಟಕ ಸರ್ಕಾರದ ಕೆಳದಿ ಚೆನ್ನಮ್ಮ ಮತ್ತು ಹೊಯ್ಸಳ ಪ್ರಶಸ್ತಿ ಯೋಜನೆಯಡಿಯಲ್ಲಿ ಸಮಾಜಸೇವಾ ಕ್ಷೇತ್ರದ ಸಾಧನೆಗಾಗಿ “ಜಿಲ್ಲಾ ಅಸಾಧಾರಣ ಪ್ರತಿಭಾ ಪುರಸ್ಕಾರ”ವನ್ನು ಸ್ವೀಕರಿಸಿದ್ದಾರೆ. 2017ರ ದೆಹಲಿಯ ರಾಷ್ಟ್ರೀಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿ ಯಕ್ಷನಾಟ್ಯ ಪ್ರದರ್ಶಿಸಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಷ್ಟ್ರ ರಕ್ಷಾಮಂತ್ರಿಗಳನ್ನು ಭೇಟಿ ಮಾಡಿರುತ್ತಾರೆ ಹಾಗೂ 18 ಕರ್ನಾಟಕ ಬೇಟಾಲಿಯನ್ NCCಯಿಂದ “ಬೆಸ್ಟ್ ಕೆಡೆಟ್ ಅವಾರ್ಡ್-2017″ನ್ನು ಪಡೆದಿದ್ದಾರೆ.
2018ರ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಂದರ್ಭದ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ “ರಾಷ್ಟ್ರೀಯ ಆದರ್ಶ ಜೈನ ಯುವ ಪ್ರಶಸ್ತಿ” ಪಡೆದ ಅತ್ಯಂತ ಕಿರಿಯ ಬಾಲಕಿ ಈಕೆ. ಉತ್ತರಪ್ರದೇಶದ ಆಗ್ರಾದಲ್ಲಿ ನಡೆದ 19ನೇ ಅಖಿಲ ಭಾರತೀಯ ಜೈನ ಪ್ರತಿಭಾ ಸನ್ಮಾನ ಸಮಾರಂಭ 2018 ರಲ್ಲಿ “ರಾಷ್ಟ್ರೀಯ ಗ್ಯಾನ್ ಪ್ರತಿಭಾ ಪುರಸ್ಕಾರ”ವನ್ನು ಪಡೆದಿದ್ದಾರೆ.

2019ರಲ್ಲಿ ಮಧ್ಯಪ್ರದೇಶದ ಮೈತ್ರಿ ಸಮೂಹ ಉತ್ತರಪ್ರದೇಶದ ಹಸ್ತಿನಾಪುರದಲ್ಲಿ ನಡೆಸಿದ ಯುವ ಸಮ್ಮೇಳನದಲ್ಲಿ “ಆಲ್ ಇಂಡಿಯಾ ಯಂಗ್ ಜೈನ್ ಅವಾರ್ಡ್-2019″ನ್ನು ನೀಡಿ ಪುರಸ್ಕರಿಸಿದೆ. ಬೆಳಗಾವಿಯ ದಕ್ಷಿಣಕನ್ನಡ ಜೈನ ಮೈತ್ರಿಕೂಟದಿಂದ “ಯುವ ಮಿನುಗುತಾರೆ” ಬಿರುದು ಪಡೆದಿದ್ದಾರೆ. ಈಕೆ ಜೈನ ಪದವಿ ಪೂರ್ವ ಕಾಲೇಜ್ ನಿಂದ “ಆಲ್ ರೌಂಡರ್ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್ -2019” ನ್ನು ಗಳಿಸಿದ್ದಾರೆ. 2020ರಲ್ಲಿ ಜವನೆರ್ ಬೆದ್ರ ಸಂಘಟಿಸಿದ ರಾಷ್ಟ್ರೀಯ ಯುವ ದಿವಸ್ – ವಿವೇಕೋತ್ಸವದಲ್ಲಿ “ವಿವೇಕ್ ಪುರಸ್ಕಾರ-ಯುವ ಪ್ರಶಸ್ತಿ 2020“ ಪಡೆದಿದ್ದಾರೆ. ಭಾರತ ಸರ್ಕಾರ ಸ್ವಾಮ್ಯದ ಉದ್ಯಮ ಸಂಸ್ಥೆಯಾದ “ಕೆ ಐ ಓ ಸಿ ಎಲ್ ಲಿಮಿಟೆಡ್”ನಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು “ಹಾನರ್ ಫಾರ್ ಔಟ್ ಸ್ಟ್ಯಾಂಡಿಂಗ್ ಎಕ್ಸಲೆನ್ಸ್“ ಮತ್ತು “ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್” ಗೌರವವನ್ನು ನೀಡಲಾಯಿತು.
ಇಷ್ಟೆಲ್ಲ ಚಟುವಟಿಕೆಗಳ ನಡುವೆಯೂ ಬಿ.ಕಾಂ ಪದವಿ ಪಡೆದು, ಪ್ರಸ್ತುತ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ. ಪಂಚಮಿ ಹಾಗೂ ಯತೀಶ್ ಬೆಂಗಳೂರಿನಲ್ಲಿ ಶ್ರೀ ಪರಂಪರಾ ಹೆಜ್ಜೆ ಗೆಜ್ಜೆ ವೈ ಪಿ ಆರ್ಟ್ ಫೌಂಡೇಶನ್ ಎಂಬ ದೊಡ್ಡ ನೃತ್ಯ ಸಂಸ್ಥೆಯನ್ನು ಸಹ ನಡೆಸುತ್ತಿದ್ದಾರೆ.
ಪತಿ ಯತೀಶ್ ಸಿನಿಮಾರಂಗದಲ್ಲಿ ಡಿಜಿಟಲ್ ಪಿ.ಆರ್.ಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಬ್ಬರು ಜೊತೆಯಾಗಿ ಯತೀ ಇವೆಂಟ್ಸ್ ಎಂಬ ಸಂಸ್ಥೆ ಯನ್ನು ಮುನ್ನಡೆಸುತ್ತಿದ್ದಾರೆ. ಅಚಲವಾದ ಸಮರ್ಪಣೆ, ನಮ್ರತೆ ಮತ್ತು ಉತ್ಸಾಹದಿಂದ ಯುವಕರನ್ನು ಪ್ರೇರೇಪಿಸುತ್ತಲೇ ಇದ್ದಾರೆ ಮತ್ತು ಭಾರತೀಯ ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಯುವ ಸಬಲೀಕರಣ ಕ್ಷೇತ್ರಗಳಿಗೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ. ಸಾಂಸ್ಕೃತಿಕ, ಕ್ರೀಡೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ, ಇನ್ನಷ್ಟು ಯುವ ಪ್ರತಿಭೆಗಳಿಗೆ ಪ್ರೇರಣೆ ಆಗಬೇಕು ಹಾಗು ನಮ್ಮ ರಾಷ್ಟ್ರವನ್ನು ಅಂತರಾಷ್ಟ್ರೀಯ ಹಾಗು ವಿಶ್ವಮಟ್ಟದಲ್ಲಿ ಬೆಳಗಿಸಬೇಕು ಎಂಬುದೇ ಪಂಚಮಿ ಮುಂದಿನ ಗುರಿಯಾಗಿದೆ.
ಇದನ್ನೂ ಓದಿ : ಬಿಬಿಕೆ 12 : ಕ್ಯಾಪ್ಟನ್ ರಘು ಟಾರ್ಚರ್ಗೆ ಸುಸ್ತಾದ ಗಿಲ್ಲಿ


















