ಬೆಂಗಳೂರು: ನೀವೂ ಈಗಷ್ಟೇ ಕಾಲೇಜು ಮುಗಿಸಿ, ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದೀರಾ? ನಿಮ್ಮ ಮಾಸಿಕ ಸಂಬಳ ಒಂದು ಲಕ್ಷ ರೂ.ಗಿಂತ ಕಡಿಮೆ ಇದೆಯಾ? ಹಾಗಾದರೆ, ನಿಮಗೆ ಕೇಂದ್ರ ಸರ್ಕಾರದಿಂದ 15 ಸಾವಿರ ರೂ. ಆರ್ಥಿಕ ನೆರವು ಸಿಗಲಿದೆ. ಹೌದು, ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ (PM Viksit Bharat Yojana) ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಹಣಕಾಸು ನೆರವು ಸಿಗಲಿದೆ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.
ಮುಂದಿನ ಎರಡು ವರ್ಷಗಳಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ ಜಾರಿಗೆ ತಂದಿದೆ. ಯೋಜನೆ ಅನ್ವಯ, ಮೊದಲ ಬಾರಿ ಕೆಲಸಕ್ಕೆ ಸೇರಿದವರಿಗೆ ಹಣಕಾಸು ನೆರವು ನೀಡಲಾಗುತ್ತದೆ. ಇದರಿಂದ ಕಂಪನಿಗಳಿಗೂ ಹಲವು ರೀತಿಯ ಉಪಯೋಗಗಳಿವೆ.
2025ರ ಆಗಸ್ಟ್ 1 ಹಾಗೂ 2027ರ ಜುಲೈ 31ರ ಅವಧಿಯಲ್ಲಿ ಕೆಲಸಕ್ಕೆ ಸೇರಿದವರು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮೂಲಕ ಯೋಜನೆಯ ನೆರವು ಪಡೆಯಲಿದ್ದಾರೆ. ಉದ್ಯೋಗಕ್ಕೆ ಸೇರಿದ 6 ತಿಂಗಳ ನಂತರ 7,500 ರೂ. ಹಾಗೂ ಒಂದು ವರ್ಷದ ಬಳಿಕ 7,500 ರೂ.ನಂತೆ ಒಟ್ಟು ಎರಡು ಕಂತುಗಳಲ್ಲಿ 15,000 ರೂ. ನೀಡಲಾಗುತ್ತದೆ.
ಉದ್ಯೋಗಿಗಳಿಗೆ ಮಾತ್ರವಲ್ಲ, ಉದ್ಯೋಗದಾತರಿಗೂ ಒಬ್ಬ ಉದ್ಯೋಗಿಯನ್ನು ನೇಮಿಸಿಕೊಂಡರೆ, ಕಂಪನಿಗೆ 3 ಸಾವಿರ ರೂ. ಹಣಕಾಸು ನೆರವು ಸಿಗಲಿದೆ. ದೇಶದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎಂಬ ಕಾರಣದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಯೋಜನೆಗಾಗಿ 90 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಹಣ ಮೀಸಲಿಟ್ಟಿದೆ. ಯೋಜನೆಯ ಲಾಭ ಪಡೆಯಲು pmvbry.epfindia.gov.in ಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಬ್ಲ್ಯಾಕ್ ಕ್ಯಾಟ್’ ಕಮಾಂಡೋ ವೇಷಧಾರಿಗಳ ಜೊತೆ ಬಂದು ‘ಥಾರ್’ ಮೇಲೆ ಪೆಟ್ರೋಲ್ ಸುರಿದ ಯೂಟ್ಯೂಬರ್!



















